ಮಧುಗಿರಿ:
ಸತತ ಬರಗಾಲದಿಂದ ತತ್ತರಿಸುತ್ತಿರುವ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಮಧುಗಿರಿ ಕಸಬಾ ವ್ಯಾಪ್ತಿಯ ಸಿದ್ದಾಪುರದ ಹಿಪ್ಪೇ ತೋಪಿನಲ್ಲಿ ಹೈ ಕೊರ್ಟ್ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ಆರಂಭಿಸಿದ ಮೊದಲ ಗೋಶಾಲೆಯನ್ನು ಗೋವಿನ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ರೈತರ ಮನೆ ಬಾಗಿಲಿಗೆ ಮೇವನ್ನು ವಿತರಿಸಿ ಯಶಸ್ವಿ ಕಾರ್ಯಕ್ರಮ ನೀಡಿದ್ದೆವು. ಆದರೂ ಬರಗಾಲ ಮುಂದುವರೆದ ಕಾರಣ ಈಗಿನ ಸರ್ಕಾರವು ಹೈ ಕೋರ್ಟ್ ಆದೇಶದಂತೆ ಗೋಶಾಲೆ ಆರಂಭಿಸಲಾಗಿದೆ. ಇಲ್ಲಿ ಪ್ರತಿ ರಾಸುಗಳಿಗೆ 6 ಕೆಜಿ ಒಣ ಮೇವು, ಒಣ ಮೇವು ಸಿಗದಿದ್ದಲ್ಲಿ 18 ಕೆಜಿ ಹಸಿ ಮೇವನ್ನು ಪ್ರತಿ ದಿನ ಉಚಿತವಾಗಿ ನೀಡಲಾಗುತ್ತದೆ.
ಒಣಮೇವು ಸಿಗದ ಕಾರಣ ಹಸಿ ಮೇವು ವಿತರಿಸಲು ಜಿಲ್ಲಾಧಿಕಾರಿಗಳು ಸರ್ಕಾದಿಂದ ಆದೇಶ ತರಬೇಕಿದೆ. ತದ ನಂತರ ಹಸಿ ಮೇವನ್ನು ನೀಡಲಾಗುತ್ತದೆ. ಗೋಶಾಲೆಗಿಂತ ಮೇವು ಬ್ಯಾಂಕ್ ಉತ್ತಮವಾಗಿದ್ದು, ರೈತರ ಮನೆ ಬಾಗಿಲಿಗೆ ಮೇವು ತಲುಪುತ್ತಿತ್ತು. ಆದರೆ ಇಲ್ಲಿ ಹಸುಗಳನ್ನು ಜೊತೆಯಲ್ಲಿ ಕರೆತಂದು ಇಲ್ಲಿಯೇ ಸಂಜೆಯವರೆಗೂ ಬೀಡು ಬಿಟ್ಟು ನಂತರ ಮನೆಗೆ ಹೋಗಬೇಕಿದ್ದು, ಇದರಿಂದ ರೈತರಿಗೆ ಅನಾನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ನಂದೀಶ್ ಮಾತನಾಡಿ ತಾಲೂಕು ಕುಡಿಯುವ ನೀರಿಗೆ ಹಾಗೂ ಜಾನುವಾರುಗಳ ಮೇವಿಗೆ ಪರಿತಪಿಸುತ್ತಿದೆ. ಸರ್ಕಾರ ಇದಕ್ಕಾಗಿ ಎಲ್ಲಾ ಕಾರ್ಯಕ್ರಮ ನೀಡುತ್ತಿದ್ದು, ಯಾರೂ ಧೃತಿಗೆಡದೆ ಎಲ್ಲರೊಂದಿಗೆ ಬರ ಪರಿಸ್ಥಿತಿಯನ್ನು ಎದುರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ತಾ.ಪಂ.ಇಓ ದೊಡ್ಡಸಿದ್ದಯ್ಯ, ಗ್ರಾ.ಪಂ. ಅಧ್ಯಕ್ಷೆ ಮಂಜಮ್ಮ, ಪಿಡಿಓಗಳಾದ ಗೌಡಪ್ಪ, ಉತ್ತಮ್, ಸದಸ್ಯರಾದ ಲೊಕೇಶ್, ಕಂಬಣ್ಣ, ಅಂಜನಮೂರ್ತಿ, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಪೀಕಾರ್ಡ್ ಸದಸ್ಯ ಚೌಡಪ್ಪ, ಕಂದಾಯಾಧಿಕಾರಿ ಜಯರಾಂ, ಸಹಾಯಕರಾದ ಪರಮೇಶ್, ನವೀನ್, ಶರಣಪ್ಪ, ಗಂಗರಾಜು ಇತರರು ಇದ್ದರು.