ತುಮಕೂರು :
ಹಾಲಿ ಶಾಸಕ ಗೌರಿಶಂಕರ್ ಧೋರಣೆಯ ವಿರುದ್ದ ಮತ್ತು ಜಿಲ್ಲಾಧಿಕಾರಿ ಹಾಗೂ ಹೇಮಾವತಿ ಇಲಾಖೆಯ ಅಧಿಕಾರಿಗಳ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡರು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.
ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ತಮ್ಮ ಸ್ವಪ್ರತಿಷ್ಟೆಗಾಗಿ ಗೂಳೂರು, ಹೆಬ್ಬೂರು, ಏತನೀರಾವರಿ ಯನ್ನು ಚಾಲನೆ ಮಾಡದಂತೆ ಆದೇಶಿಸಿರುವುದರಿಂದ ಹೆದರಿದ ಅಧಿಕಾರಿಗಳು ಹೇಮಾವತಿ ನಾಲೆಯಿಂದ ಕೆರೆಗಳಿಗೆ ನೀರು ಹರಿಸದೇ ಮೋಟಾರ್ ಸ್ಥಗಿತಗೊಳಿಸಿದ್ದಾರೆ. ಆ ಭಾಗದ ಕೆರೆಗಳು ಬರಿದಾಗಿದ್ದು ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಮಳೆಯಿಲ್ಲದೆ ತೀವ್ರತರವಾದ ಬರಗಾಲದಿಂದ ಬೇಸತ್ತು ಬಸವಳಿದ ರೈತಾಪಿವರ್ಗಕ್ಕೆ ಹರಿಯಬೇಕಿದ್ದ ನೀರು ಸ್ಥಗಿತಗೊಳಿಸಿ ವಿದೇಶದಲ್ಲಿ ಮೋಜು ಮಸ್ತಿ ಮಾಡಲು ಹೋಗಿದ್ದಾರೆ. ಆ ಭಾಗದ ಜನಪ್ರತಿನಿಧಿಯಾಗಿ ತನಗೆ ಮತನೀಡಿದ ಮಾತದಾರರಾದ ರೈತರುಗಳ ಸಂಕಷ್ಟಕ್ಕೆ ನೆರವಾಗುವುದನ್ನ ಬಿಟ್ಟು ಹರಿಯುತ್ತಿದ್ದ ನೀರನ್ನೇ ಸ್ಥಗಿತಗೊಳಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ, ಈ ಹಿಂದೆ ಮಾಜಿ ಶಾಸಕ ಬಿ.ಸುರೇಶ್ ಗೌಡರು 19- 8-2019 ರ ಸೋಮವಾರ ಮಾನ್ಯ ಜಿಲ್ಲಾಧಿಕಾರಿರವರನ್ನು ಬೇಟಿಮಾಡಿ ಹೆಬ್ಬೂರು- ಗೂಳೂರು ಏತನೀರಾವರಿ ಚಾಲನೆ ಮಾಡಿ ಎಂದು ಲಿಖಿತವಾಗಿ ಮನವಿ ಮಾಡಲಾಗಿತು. ಈ ಮನವಿಗೆ ಸ್ಪಂದಿಸಿ ನೀರನ್ನು ಹರಿಸುತ್ತಿದ್ದರು.
ಆದರೆ ಅದನ್ನು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ನೀರು ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಅವರ ಆದೇಶದನ್ವಯ ನೀರನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಹೇಮಾವತಿ ಇಲಾಖೆಯ ಅಧಿಕಾರಿ ಮತ್ತು ಬೆಸ್ಕಾಂ ಅಧಿಕಾರಿಗಳ ಮಾತಿನ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೂಡಲೇ ಸ್ಥಗಿತಗೊಳಿಸಿರುವ ಮೋಟಾರ್ ಗಳಿಗೆ ಚಾಲನೆನೀಡಿ ಕರೆಗಳಿಗೆ ನೀರು ಹರಿಸದಿದ್ದರೆ ಶಾಸಕರು ಮತ್ತು ಅಧಿಕಾರಿಗಳ ವಿರುದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸರ್ಕಾರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ನಿರ್ದೇಶನ ನೀಡಿದ್ದರೂ ಸಹ ನೀರು ಹರಿಸಲು ಅಡ್ಡಿಯಾಗುತ್ತಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ.್ಲ ಕಳೆದ ಬಾರಿ ಕೆರೆಗಳಿಗೆ ನೀರು ತುಂಬಿಸದಿರುವುದರಿಂದ ನಾಗವಲ್ಲಿ, ಹೊಳಕಲ್, ಹೊನ್ನುಡಿಕೆ, ಹೆಬ್ಬೂರು, ಗೂಳೂರು, ಕಣಕುಪ್ಪೆ, ಭಾಗದಲ್ಲಿದ್ದ ಸಾವಿರಾರು ಬೋರ್ ವೆಲ್‍ಗಳು ಬತ್ತಿಹೋಗಿವೆ. ಈ ಬಾರಿಯೂ ಕೆರೆಗಳು ಭರ್ತಿಯಾಗದಿದ್ದರೆ ಅಳಿದುಳಿದ ಬೋರ್ ವೆಲ್‍ಗಳು ಬತ್ತಿ ಮುಚ್ಚಿಹೋಗುತ್ತವೆ. ರೈತರು ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಎದುರಾಗಿಬಿಡುತ್ತದೆ. ಕುಡಿಯುವ ನೀರಿಗಾಗಿ ಈಗಾಗಲೇ ಹಾಹಾಕಾರ ಸೃಷ್ಟಿಯಾಗಿದೆ. 15 ದಿನಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ, ಮುಂದೆ ನನ್ನ ರೈತರಿಗೆ ತೊಂದರೆಯಾಗಲು ನಾನು ಬಿಡುವುದಿಲ.್ಲ ಯಾವ ರೀತಿಯ ಹೋರಾಟಕ್ಕೂ ಸಿದ್ದನಿದ್ದೇನೆ. ಮಾಜಿ ಸಚಿವ ಸಿಗಡು ಶಿವಣ್ಣ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಸಮರ್ಪಕವಾಗಿ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಇಲಾಖೆ ಅಧಿಕಾರಿಗಳು ಅವರ ಧೋರಣೆ ಕಾರಣ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ ಪಂ ಸದಸ್ಯರು ನಂದೀಶ್ ಸೇರಿದಂತೆ ಇತರರು ಹಾಜರಿದ್ದರು.