ಗುಬ್ಬಿ :
ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ವೈಯಕ್ತಿಕ ದ್ವೇಷದ ಮಾತು ಇಲ್ಲಿ ಬರುವಂತಿಲ್ಲ. ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದದು ಎಂದು ಸಂಸದ ಜಿ.ಎಸ್.ಬಸವರಾಜು ಸ್ಪಷಪಡಿಸಿದರು.
ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ದೇವಾಲಯ ಜೀಣೋದ್ದಾರ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆ ಅವರ ಕರ್ತವ್ಯವನ್ನು ಕಾನೂನು ರೀತಿ ನಡೆಸಿದ್ದಾರೆ. ಮೆಡಿಕಲ್ ಸೀಟ್ ಮಾರಾಟ ದಂಧೆ ನಡೆದಿರುವ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆಯುತ್ತಿದೆ. ಪರಮೇಶ್ವರ್ ಅವರು ನನಗೆ ಒಳ್ಳೆಯ ಸ್ನೇಹಿತ. ಅವರ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಎಂದರು.
ಸೇವಾ ಕಾರ್ಯ ನಡೆಸಬೇಕಾದ ಶಿಕ್ಷಣರಂಗ ಸಂಪೂರ್ಣ ಕಮರ್ಷಿಯಲ್ ಆಗಿ ಕಲುಷಿತಗೊಂಡಿರುವುದು ವಿಷಾದಕರ ಸಂಗತಿ. ಪರಮೇಶ್ವರ್ ಆಪ್ತ ಸಹಾಯಕನ ಆತ್ಮಹತ್ಯೆ ನೋವಿನ ಘಟನೆ. ಹಿನ್ನಲೆತಿಳಿಯಲು ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ ಎಂದ ಅವರು ಹೇಮಾವತಿ ಡಿಸೆಂಬರ್ ಮಾಹೆವರೆಗೆ ಜಿಲ್ಲೆಗೆ ಹರಿಯಲಿದೆ. ಗುಬ್ಬಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಬದ್ದನಾಗಿದ್ದೇನೆ. ಕುಡಿಯುವ ನೀರು ಒದಗಿಸುವ ಕೆಲ ಯೋಜನೆಗೆ ಕಾಯಕಲ್ಪ ನೀಡಲಾಗಿದೆ. ಈ ಜತೆಗೆ ಹೊಸ ಯೋಜನೆಗಳಿಗೂ ರೂಪುರೇಷ ಸಿದ್ದಗೊಳಿಸಲಾಗಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಸಚಿವರೇ ಆಗಮಿಸಿ ಅಸ್ತು ನೀಡಲಿದ್ದಾರೆ ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ನೀಡಿದ 1200 ಕೋಟಿ ರೂಗಳ ನೆರವಿನೊಂದಿಗೆ ರಾಜ್ಯ ಸರ್ಕಾರ ಕನಿಷ್ಠ 15 ಸಾವಿರ ಕೋಟಿ ರೂಗಳ ಅನುದಾನವನ್ನು ಆ ಪ್ರದೇಶಗಳಿಗೆ ನೀಡಲು 224 ಶಾಸಕರ ನಿಧಿಯಿಂದ ಶೇ.50 ರಷ್ಟು ಅನುದಾನವನ್ನು ವಾಪಾಸ್ ತರಲಾಗಿದೆ. ಈ ಹಣ ಸದ್ಬಳಕೆಗೆ ಮಾಡುವ ನಿಟ್ಟಿನಲ್ಲಿ ಶಾಸಕರೂ ಕೂಡ ಒಪ್ಪಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಬಳಕೆಯಾಗದೆ ಉಳಿದ ಹಣವನ್ನು ವಾಪಸ್ ತರಲಾಗುತ್ತಿದೆ. ಗುಬ್ಬಿ ಪಟ್ಟಣ ಪಂಚಾಯಿತಿಯ 10 ಕೋಟಿ ಹಣ ಕಳೆದ ಒಂದು ವರ್ಷದಿಂದ ಬಳಕೆಯಾಗದ ಹಿನ್ನಲೆಯಲ್ಲಿ ಅನುದಾನ ಮರಳಿ ಸರ್ಕಾರ ಪಡೆದುಕೊಂಡಿದೆ. ಇಲ್ಲಿಯೇ ತಿಳಿಯುತ್ತದೆ ಪಪಂ ಅಭಿವೃದ್ದಿ ಹೇಗೆ ಸಾಗಿದೆ ಎಂದು ವ್ಯಂಗ್ಯವಾಡಿದರು.
ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿ ಇರುವ ಹಿನ್ನಲೆಯಲ್ಲೇ ಚನ್ನಬಸವೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾರ್ಯ ನಡೆಸಲಾಯಿತು. ಈಗ ಭವ್ಯ ದೇವಾಲಯ ಪ್ರವಾಸಿಗರನ್ನು ಆಕರ್ಷಿಸಿದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಹಲವು ಅಭಿವೃದ್ದಿ ಕೆಲಸ ನಡೆಸಲಾಗುವುದು. ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ನೆನೆಗುದಿಗೆ ಬಿದ್ದ ಬಗ್ಗೆ ಸಾಕಷ್ಟು ದೂರುಗಳಿವೆ. ಇದಕ್ಕೆ ಸಂಬಂಧಿಸಿದ 46 ಲಕ್ಷ ರೂಗಳೊಂದಿಗೆ ಸರ್ಕಾರದಿಂದ 70 ಲಕ್ಷ ಹಣ ಬಿಡುಗಡೆಗೊಳಿಸಿ ಸುಂದರ ಯಾತ್ರಿ ನಿವಾಸ ಇಲ್ಲಿ ನಿರ್ಮಿಸಲಾಗುವುದು. ಯಡಿಯೂರು ಮಾದರಿ ಪುಣ್ಯಕ್ಷೇತ್ರವಾಗಿ ಗುಬ್ಬಿಯನ್ನು ದೇಶದೆಲ್ಲೆಡೆ ಖ್ಯಾತಿಗೊಳಿಸಲು ಮಹಾದ್ವಾರ ಕಾರ್ಯ ಶೀಘ್ರದಲ್ಲಿ ಆರಂಭಿಸಲಾಗುವುದು. 108 ಅಡಿಗಳ ಉದ್ದದ ಮಹಾಗೋಪುರ ಜತೆಗೆ ರಜತರಥ ನಿರ್ಮಾಣ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ವತಿಯಿಂದ ರಜತ ಶಿವಲಿಂಗ ವಿಗ್ರಹ ನೀಡಿ ಗೌರವಿಸಲಾಯಿತು. ಪಟ್ಟಣದ ವಿವಿಧ ಸಂಘಸಂಸ್ಥೆಗಳು, ವಿವಿಧ ಕೋಮಿನ ಮುಖಂಡರು ಸಂಸದರಿಗೆ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜಯರಾಜ್, ಜಿಪಂ ಸದಸ್ಯರಾದ ಡಾ.ನವ್ಯಾಬಾಬು, ಜಿ.ಎಚ್.ಜಗನ್ನಾಥ್, ವರ್ತಕ ಪರಮಶಿವಯ್ಯ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಕೆ.ವಿ.ಪರಮೇಶ್ವರಯ್ಯ, ಖಜಾಂಚಿ ಸಿ.ಎಂ.ಶರಶ್ಚಂದ್ರಬೋಸ್, ಸಹ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್, ದಾಸೋಹ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್‍ಕುಮಾರ್, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ ಇತರರು ಇದ್ದರು.