ತುಮಕೂರು:
ರೈತರಿಗೆ ಶೇ.10ರಷ್ಟು ಬಡ್ಡಿಗೆ ಸಾಲವನ್ನು ನೀಡಿ, ಸಾಲ ಮರುಪಾವತಿಸಲು ಆಗದೇ ಇದ್ದಾಗ ರೈತರ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವ ಮೀಟರ್ ಬಡ್ಡಿ ದಂಧೆಕೋರರಿಂದ ರೈತರಿಗೆ ರಕ್ಷಣೆ ನೀಡಬೇಕು ಹಾಗೂ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮೇಳೆಕಲ್ಲಹಳ್ಳಿ, ಶಿರಾ ತಾಲ್ಲೂಕು ಹುಂಜನಾಳು ಗ್ರಾಮದ ಜೈಶೀಲ ಎಂಬಾಕೆ ರೈತರಿಗೆ ಸಾಲವನ್ನು ನೀಡಿ, ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ ಎಂದು ಕಿರುಕುಳ ನೀಡಿ, ರೈತರ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವುದಲ್ಲದೆ, ಸಾಲ ತೀರುವವರೆಗೆ ರೈತರನ್ನು ತನ್ನ ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗುಬ್ಬಿ ತಾಲ್ಲೂಕಿನ ಶಂಕರಮೂರ್ತಿ ಎಂಬ ರೈತನಿಗೆ 1 ಲಕ್ಷ ರೂ ಸಾಲ ನೀಡಿ, ಬಡ್ಡಿ, ಚಕ್ರಬಡ್ಡಿ, ಸುಸ್ತಿ ಬಡ್ಡಿ ಎಂದು 3 ಲಕ್ಷ ರೂ ಕೊಡುವಂತೆ ಒತ್ತಾಯಿಸಿದಲ್ಲದೆ, 1 ಎಕರೆ 11 ಗುಂಟೆ ಅಡಿಕೆ ತೋಟವನ್ನು ಬಡ್ಡಿ ಹಣಕ್ಕಾಗಿ ಬೆದರಿಕೆ ಹಾಕಿ ಬರೆಸಿ ಕೊಂಡಿದ್ದಾರೆ, ಅದೇ ರೀತಿ ಸಿರಾ ತಾಲ್ಲೂಕು ಈರಣ್ಣ ಎಂಬುವರ ಕುಟುಂಬವನ್ನು ಬೆದರಿಸಿ ತನ್ನ ಮನೆಯಲ್ಲಿ ಜೀತಕ್ಕೆ ಇಟ್ಟು ಕೊಂಡು ಶೋಷಣೆ ಮಾಡುತ್ತಿದ್ದಾರೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಮೀಟರ್ ಬಡ್ಡಿ ವ್ಯವಹಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ ಹೀಗಾದರೆ ನಾವು ಯಾರ ಬಳಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ, ರೈತರಿಗೆ ಸಾಮೂಹಿಕವಾಗಿ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು, ಸಾಲದ ಕೂಪದಲ್ಲಿ ದಿನವೂ ಸಾಯುವ ಬದಲಾಗಿ ಒಂದೇ ಬಾರಿಗೆ ಜೈಶೀಲ ಅವ ರಿಂದ ಶೋಷಣೆಗೆ ಒಳಗಾಗಿರುವ ರೈತರು ದಯಾಮರಣಕ್ಕೆ ಒಳಗಾಗುತ್ತಾರೆ, ಸಹಕಾರ ಸಂಘಗಳ ನಿಬಂಧಕರು ಈ ಬಗ್ಗೆ ತನಿ ಖೆ ನಡೆಸಲು ಜೈಶೀಲ ಅವರನ್ನು ಕಚೇರಿಗೆ ಬರಲು ನೋಟೀಸ್ ನೀಡಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಶೋಷಣೆಗೆ ಒಳಗಾದ ರೈತ ಶಂಕರಲಿಂಗಪ್ಪ, ಮಾತನಾಡಿ, ಭೂಮಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಜೈಶೀಲ ಅವರಿಂದ ಒಂದು ಲಕ್ಷ ರೂ ಸಾಲವನ್ನು ಪಡೆದಿದ್ದು, ಒಂದು ವರ್ಷದ ನಂತರ 3 ಲಕ್ಷ ಬಡ್ಡಿ, ಚಕ್ರಬಡ್ಡಿ ಕೊಡಬೇಕು ಇಲ್ಲವಾದರೆ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಿದಾಗ ಒಂದು ಲಕ್ಷ ರೂ ನೀಡಿದ್ದು, ಖಾಲಿ ಚೆಕ್‍ಗಳನ್ನು ನೀಡಿದ್ದರೂ, ಅಡಿಕೆ ತೋಟವನ್ನು ಬರೆಸಿಕೊಂಡಿದ್ದಾರೆ, ವಾರ್ಷಿಕ ಲಕ್ಷಾಂತರ ರೂ ಆದಾಯವನ್ನು ಅದರಿಂದಲೇ ಪಡೆದುಕೊಳ್ಳುತ್ತಿದ್ದರು, ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀನು ಅಭಿವೃದ್ಧಿಗಾಗಿ ಸಾಲವನ್ನು ಪಡೆದುಕೊಂಡು ಈಗ ಜಮೀನು ಇಲ್ಲದೆ ಸಂಕಷ್ಟಕ್ಕೀಡಾಗಿದ್ದೇವೆ, ಸಾಲದ ಬಡ್ಡಗಾಗಿ ಭೂಮಿಯನ್ನು ಕ್ರಯಕ್ಕೆ ಬರೆಸಿಕೊಂಡಿರುವ ಜೈಶೀಲಾ ಅವರು, ಹಣ ನೀಡಿದಾಗ ಭೂಮಿಯನ್ನು ವಾಪಾಸ್ ಮಾಡುವುದಾಗಿ ಹೇಳಿದ್ದಾರೆ, ವರ್ಷದಿಂದ ವರ್ಷಕ್ಕೆ ಬಡ್ಡಿಯನ್ನು ಹೆಚ್ಚಿಸಿಕೊಂಡು ಹಣವನ್ನು ಹೆಚ್ಚಿಸುತ್ತಿದ್ದು, ಭೂಮಿಯನ್ನು ವಾಪಾಸ್ ಕೇಳಲು ಹೋದರೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈರಣ್ಣ ಅವರು ಮಾತನಾಡಿ ಕಳೆದ ಮೂರು ವರ್ಷದಿಂದ ಜೈಶೀಲ ಅವರ ಮನೆಯಲ್ಲಿ ಜೀತ ಮಾಡುತ್ತಿದ್ದು, ಸಾಲಪಡೆದ ಹಣಕ್ಕೆ ಬಡ್ಡ ಕಟ್ಟಲು ಆಗದೇ ಭೂಮಿಯನ್ನು ಬರೆದುಕೊಟ್ಟು, ಮಾಡುವ ಕೆಲಸಕ್ಕೆ ಸಂಬಳವು ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಜೈಶೀಲ ಅವರಿಂದ ಬಿಡುಗಡೆಗೊಳಿಸದೇ ಇದ್ದಲ್ಲಿ, ದಯಾಮರಣಕ್ಕೆ ಆಸ್ಪದ ಕಲ್ಪಿಸುವಂತೆ ಮನವಿ ಮಾಡಿದ ಅವರು, ಜೈಶೀಲ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ರೈತ ಬಂಧು ವೇದಿಕೆ ರಾಜ್ಯಾಧ್ಯಕ್ಷ ಹೊನ್ನೇಶ್‍ಗೌಡ, ಸಚಿನ್, ಶಿವಕುಮಾರ್, ಮುನಿರಾಜು, ಶಿವರಾಜು, ರಾಮಮೂರ್ತಿ, ರಾಮಸ್ವಾಮಿ, ಶ್ರೀನಿವಾಸ್, ಸುಶೀಲಮ್ಮ ಇತರರಿದ್ದರು.