ತುಮಕೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಅವರು ನೀಡಿರುವ ಹಣದ ಭಯೋತ್ಪಾಧಕ ಹೇಳಿಕೆಯನ್ನು ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಜನಪರ ಆಡಳಿತ ನೀಡಿ, ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮನಸ್ವಿನಿ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯನವರು, ಬಿಜೆಪಿ ಪಕ್ಷದವರು ಮಹಾರಾಷ್ಟ್ರ ಚುನಾವಣೆಗೆ ಗೆಲ್ಲಲ್ಲು ಟ್ರಂಪ್ ಕಾರ್ಡಾಗಿ ಬಳಕೆ ಮಾಡುತ್ತಿರುವ ಭಾರತ ರತ್ನ ಪ್ರಶಸ್ತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ವೀರ ಸಾರ್ವಕರ್‍ಗೆ ನೀಡುವ ಮೊದಲು ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಸಿದ್ದಗಂಗಾ ಶ್ರೀಗಳಿಗೆ ನೀಡುವಂತೆ ಹೇಳಿಕೆ ನೀಡಿದ್ದಾರೆ. ಇದನ್ನು ತುಮಕೂರು ಜಿಲ್ಲೆಯ ಜನರಾದ ನಾವುಗಳು ಸ್ವಾಗತಿಸಬೇಕಾಗಿದೆ.
ಅದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ತಾವು ಮುಖ್ಯಮಂತ್ರಿಯಾಗಿದ್ದಾಗಲೂ ಕೇಂದ್ರಕ್ಕೆ ಪತ್ರ ಬರೆದಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಗಳನ್ನು ಹಣದ ಭಯೋತ್ಪಾಧಕ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ ಸೊಗಡು ಶಿವಣ್ಣನವರಿಂದ ಈ ರೀತಿಯ ಹೇಳಿಕೆ ಸರಿಯಲ್ಲ. ಇನ್ನು ಮುಂದಾದರೂ ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಲಿ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಸಲಹೆ ನೀಡಿದ್ದಾರೆ.