ಚಿಕ್ಕನಾಯಕನಹಳ್ಳಿ :
ಅಂತರ್ಜಲ ಅಭಿವೃದ್ದಿಗಾಗಿ ದೇಶದ ಮಹತ್ವದ ಯೋಜನೆಯೆನಿಸಿದ ಅಟಲ್ ಭೂಜಲ್ ಯೋಜನೆ ಜಾರಿಗಾಗಿ ದೇಶದಲ್ಲಿಯೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಯೋಜನೆಯ ಕುರಿತಾಗಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿಇಲಾಖೆಯ ರಾಜ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ದೆಹಲಿಯ ಭಾರತೀಯ ವಿಜ್ಞಾನ ಭವನದಲ್ಲಿ ಆರು ಸಾವಿರ ಕೋಟಿರೂ.ಗಳ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದರಲ್ಲಿ ರಾಜ್ಯಕ್ಕೆ 1200ಕೋಟಿರೂ. ನಿಗಧಿ ಮಾಡಲಾಗಿದೆ. ಯೋಜನೆ ಪೂರ್ಣಗೊಳ್ಳಲು ಐದುವರ್ಷ ನಿಗಧಿ ಮಾಡಲಾಗಿದೆ. ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕು 1199 ಗ್ರಾಮಪಂಚಾಯಿತಿ,39703 ಚದರ ಕಿಲೋಮೀಟರ್‍ಗಳಲ್ಲಿ ಅಂತರ್ಜಲ ಅಭಿವೃದ್ದಿಗೊಳಿಸುವ ಮೂಲಕ 82,47186 ಜನರಿಗೆ ಇದರಿಂದ ಲಾಭವಾಗಲಿದೆ.
ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಸಿರಾ, ತುಮಕೂರು ತಾಲ್ಲೂಕುಗಳು ಯೋಜನೆಯಲ್ಲಿ ಸೇರಿದೆ. ಈಗಾಗಲೇ ಜಿಲ್ಲೆಯಾದ್ಯಂತ ಅಬ್ಸರ್ವೇಟೀವ್ ಬೋರ್‍ಗಳನ್ನು ಸಣ್ಣ ನೀರಾವರಿ ಇಲಾಖೆಯಡಿ ಕೊರೆಯಲಾಗಿದೆ. ತಾಲ್ಲೂಕಿನಲ್ಲೂಸಹ ಇಂತಹ 7 ಬೋರ್ ಕೊರೆಯಲಾಗಿದೆ. ತಾಲ್ಲೂಕಿನಲ್ಲಿ 2010ರಲ್ಲಿ 9.8 ಮೀಟರ್‍ನಲ್ಲಿದ್ದ ಅಂತರ್ಜಲ 2018ಕ್ಕೆ 48 ಮೀಟರ್ ಕೆಳಗಿಳಿದಿದೆ. ಇದೊಂದು ಗಣನೀಯ ಕುಸಿತವಾಗಿದ್ದು ಮುಂದಿನ ಅಪಾಯ ತಪ್ಪಿಸುವ ಉದ್ದೇಶದಿಂದ ಅಂತರ್ಜಲವನ್ನು ವ್ಯಾಪಕವಾಗಿ ಪುನಶ್ವೇತನಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ಈ ಯೋಜನೆಯ ಮೊದಲ ಹಂತವಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಬೋರ್‍ವೆಲ್‍ಗಳ ಸ್ಥಿತಿಗತಿಗಳ ಬಗ್ಗೆ ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳು ಇನ್ನೈದು ದಿನದಲ್ಲಿ ಮಾಹಿತಿ ನೀಡಬೇಕು. ನಮಗೆ ಅಂತರ್ಜಲದ ಸಮಗ್ರ ಚಿತ್ರಣ ನೀಡಿದರೆ ಈ ಯೋಜನೆಯ ಕಾರ್ಯಗತಕ್ಕೆ ಮುಂದಾಗಬಹುದು. ಇದಕ್ಕಾಗಿಯೇ ಕೊರೆಯಲಾಗಿರುವ ಅಬ್ಸರ್ವೇಟೀವ್ ಬೋರ್‍ಗಳನ್ನು ಮಾತ್ರ ಲೆಖ್ಖಕ್ಕೆ ಪರಿಗಣಿಸದೆ ಗ್ರಾಮಗಳಲ್ಲಿ ಕೊರೆದಿರುವ ಇತರೆ ಬೋರ್‍ಗಳ ಮಾಹಿತಿಯನ್ನು ಪಡೆದು ವರದಿ ನೀಡಿರೆಂದರು. ಜಿಯಾಲಿಜಿಸ್ಟ್‍ಗಳೂ ಸಹ ಇದಕ್ಕೆ ಭಾಗಿದಾರರಾಗಿದ್ದು ಸರ್ವೆ ಮೂಲಕ ಅಂತರ್‍ರ್ಜಲÀದ ವರದಿ ನೀಡಬೇಕಿದೆ ಎಂದರು.
ಇದರ ಜೊತೆಯಲ್ಲಿ ಕಂದಾಯ, ಸಣ್ಣ ನೀರಾವರಿ ಇಲಾಖೆಯವರು ಒಂದಾಗಿ ತಾಲ್ಲೂಕಿನ ಕೆರೆಗಳ ಸ್ಥಿತಿಗತಿಗಳ ಮಾಹಿತಿ ಪಡೆಯಬೇಕು, ಕೆರೆ ಹೂಳು ತುಂಬಿರುವುದು, ಒತ್ತುವರಿ ತೆರವುಗೊಳಿಸುವುದು, ಹೂಳೆತ್ತುವ ಅಗತ್ಯವಿರುವ ಕೆರೆಗಳಾವವು, ಹೂಳೆತ್ತಲು ಅವಶ್ಯಕತೆ ಇಲ್ಲದರಿರುವ ಕೆರೆಗಳನ್ನು ಪಟ್ಟಿಮಾಡಿ, ಹಾಗೂ ಸಂಬಂಧಿಸಿದ ಹಳ್ಳಗಳ ಸ್ಥಿತಿ, ಅದರಲ್ಲಿ ತುಂಬಿರುವ ಹೂಳು, ಒತ್ತುವರಿ ಮತ್ತು ಜಂಗಲ್ ನಿವಾರಣೆಯ ಬಗ್ಗೆ ಮಾಹಿತಿ ಕೊಡಬೇಕು. ನಮ್ಮಲ್ಲಿ ಈಗಾಗಲೇ ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆ ಕಾರ್ಯ ನಡೆದಿದೆ. ಇದರ ಅನುಷ್ಠಾನದೊಳಗೆ ನಾವು ತಾಲ್ಲೂಕಿನಲ್ಲಿ ಹುದುಗಿರುವ ಎಲ್ಲಾ ಹಳ್ಳಗಳ ಸಮಗ್ರ ಅಧ್ಯಯನ ಹಾಗೂ ಎಲ್ಲಾ ಹಳ್ಳಗಳನ್ನು ಸುಸ್ಥಿತಿಗೊಳಿಸಲೇ ಬೇಕು. ಕೆರೆತುಂಬಿ ಕೋಡಿ ಹರಿದರೆ ಮಾತ್ರ ಅಂತರ್ಜಲ ಅಭಿವೃದ್ದಿ ಕಾಣಲಿದೆ.
ಜಲಸಂರಕ್ಷಣೆ ಹಾಗೂ ಅಂತರ್ಜಲ ಪುನಶ್ವೇತನಕ್ಕಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯವರು ರೈತರು ಬಳಸುವ ಹನಿನೀರಾವರಿ, ತುಂತುರು ನೀರಾವರಿ ಹಾಗೂ ಇತರೆ ನೀರಾವರಿ ವಿಧಾನಗಳ ಸಮಗ್ರ ಅಧ್ಯಯನ ನಡೆಸಿ ಎಲ್ಲಿ ಅಗತ್ಯಕ್ಕಿಂತ ನೀರು ಪೋಲಾಗುತ್ತಿದೆ ಹಾಗೂ ಅದರ ಸದ್ಬಳಕೆಯ ವಿವರ ನೀಡಬೇಕು. ಇದರ ಜೊತೆಗೆ ಇಲಾಖೆಯಿಂದ ನಿರ್ಮಿಸಿರುವ ಚೆಕ್‍ಡ್ಯಾಂ, ಮತ್ತು ಹಳ್ಳಗಳಲ್ಲಿ ಮತ್ತು ನೆಲದಡಿ ಡಕ್ ನಿರ್ಮಾಣ, ಅರಣ್ಯಗಳಲ್ಲಿ ಹರಿದು ಹೋಗುವ ನೀರನ್ನು ತಡೆಯಲು ಒಂದು ಮೀಟರ್ ಆಳದ ಗುಂಡಿಗಳನ್ನು ನಿರ್ಮಿಸುವ ಮೂಲಕ ನೀರಿಂಗಿಸುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಇಲಾಖೆ ಎಲ್ಲರೀತಿಯ ಖರ್ಚನ್ನು ಭರಿಸಲಿದೆ. ತಾಲ್ಲೂಕಿಗೆ ಅಗತ್ಯವಿದ್ದರೆ ಇನ್ನೂ ನಾಲ್ಕು ಚೆಕ್‍ಡ್ಯಾಂಗಳನ್ನು ನೀಡಲಾಗುವುದು. ಈ ಪ್ರಾಯೋಗಿಕ ಯೋಜನೆ ಫಲಪ್ರಧವೆನಿಸಿದರೆ ಸಮಗ್ರ ಯೋಜನೆಯ ಕಾರ್ಯಗತಕ್ಕೆ ಮೂರು ವರ್ಷದಲ್ಲಿ 300ರಿಂದ 400 ಕೋಟಿರೂ. ವಿನಿಯೋಗಿಸಬಹುದಾಗಿದೆ ಇದಕ್ಕಾಗಿ ಸಮಯವನ್ನು ಧೀರ್ಘವಾಗಿ ಎಳೆಯದೆ ಒಂದು ವಾರದಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಯಿಂದ ವರದಿ ಸಿದ್ದಪಡಿಸಿರೆಂದರು. ಈ ಸಂದರ್ಭದಲ್ಲಿ ಎಂ. ಶಿವಸ್ವಾಮಿ, ಕೆರೆ ಅಭಿವೃದ್ದಿ ಇಲಾಖೆಯ ಅಧೀಕ್ಷಕ ನಾಗರಾಜು, ಜಿಯಾಲಜಿಸ್ಟ್ ಜಗದೀಶ್ವರಿ, ತಹಸೀಲ್ದಾರ್ ತೇಜಸ್ವಿನಿ, ಇಓ ನಾರಾಐಣಸ್ವಾಮಿ ಮುಂತಾದವರಿದ್ದರು.