ತುಮಕೂರು:
ಕುರುಬ ಸಮುದಾಯದ ಮುಖಂಡರಿಗೆ ನೀಡಿರುವ ಭರವಸೆಯಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಕ್ತಸ್ಥಾನ ನೀಡಬೇಕೆಂದು ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಆರ್‍ಎಂಸಿ ರಾಜಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುರುಬ ಸಮುದಾಯದ ಶಾಸಕರು ಕಾರಣರಾಗಿದ್ದು, ಉಪ ಚುನಾವಣೆ ವೇಳೆ ಬಿಎಸ್‍ವೈ ನೀಡಿದ್ದ ಭರವಸೆಯಂತೆ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರಿಗೆ ಸೂಕ್ತಸ್ಥಾನ ಮಾನವನ್ನು ನೀಡಬೇಕು, ಬಿಎಸ್‍ವೈ ನೀಡಿದ್ದ ಭರವಸೆಯನ್ನು ಈಡೇರಿಸದಿದ್ದರೆ ಸಮುದಾಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯ ಮನ್ನಣೆ ನೀಡಿದ್ದರಿಂದಲೇ ಬಿಎಸ್‍ವೈ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು, ರಾಜಕಾರಣ ಏನೇ ಇದ್ದರೂ ಕುರುಬ ಸಮುದಾಯ ಒಂದಾಗುತ್ತಿದೆ, ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಅವರು ಅವರ ಪಕ್ಷಗಳಲ್ಲಿ ಪ್ರಮುಖರಾಗಿದ್ದಾರೆ, ಬಿಎಸ್‍ವೈ ಅವರು ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿಗಿರಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು ಅದರಂತೆ ಅವರು ನಡೆದುಕೊಳ್ಳಲಿ ಎಂದು ಆಗ್ರಹಿಸಿದರು.
ಕುರುಬ ಸಮಾಜದ 2ನೇ ಹಂತದ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಹೋರಾಟ ನಡೆಸುತ್ತಿದ್ದು, ಪಕ್ಷಗಳಲ್ಲಿ ನಿಷ್ಠಾವಂತರಾಗಿ ದುಡಿದಿರುವ ಸಮುದಾಯದ ಯುವಕರಿಗೆ ಯಾವುದೇ ಸರ್ಕಾರವಿದ್ದರೂ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಸಮುದಾಯದ ಒತ್ತಾಯವಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕಾಗಿ ದುಡಿದಿರುವ ಕುಮಾರಸ್ವಾಮಿ, ಪುಟ್ಟರಾಜು.ಸಿ, ಎಸ್.ಶಂಕರ್ ಅವರನ್ನು ನಿಗಮಮಂಡಳಿಗಳಿಗೆ ನೇಮಕ ಮಾಡಲು ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಶ್ರಮಿಸಿರುವ ಡಾ.ಹುಲಿನಾಯ್ಕರ್, ಬೇವಿನಹಳ್ಳಿ ಮಂಜುನಾಥ್ ಅವರಿಗೆ ಬಿಜೆಪಿ ಸರ್ಕಾರ ಮನ್ನಣೆ ನೀಡಬೇಕು ಹಾಗೂ ಸಮುದಾಯದವರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರಿಗೆ ಸೂಕ್ತಸ್ಥಾನವನ್ನು ಕಲ್ಪಿಸಲು ವಿಫಲವಾದರೆ ಬಿಜೆಪಿ ಪಕ್ಷದ ವಿರುದ್ಧ ಸಮುದಾಯ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಂತೆ ಬೇರೆ ಯಾವ ಪಕ್ಷದಲ್ಲಿಯೂ ಕುರುಬ ಸಮಾಜದ ಮುಖಂಡರು ಬೆಳೆಯಲು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರೇ ಸುಪ್ರೀಂ, ಈಶ್ವರಪ್ಪ ಅವರು ಬಿಜೆಪಿಯಲ್ಲಿ ಪ್ರಮುಖರಾಗಿದ್ದು ಸಮುದಾಯದ ಎಲ್ಲ ರಾಜಕೀಯ ಮುಖಂಡರೊಂದಿಗೆ ಸಮಾಜವಿದ್ದು, ಕುರುಬ ಸಮಾಜವನ್ನು ಅಭಿವೃದ್ಧಿ ಪಡಿಸುವುದಷ್ಟೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಕುರುಬ ಸಮಾಜ ಸಂಘಟಿತವಾಗುತ್ತಿದ್ದು, ಈಶ್ವರಪ್ಪ ಅವರಿಗೆ ಸೂಕ್ತಸ್ಥಾನ ನೀಡುವಂತೆ ಈ ಹಿಂದೆಯೇ ಪ್ರದೇಶ ಕುರುಬರ ಸಂಘ ಒತ್ತಾಯಿಸಿದೆ ಆದರೆ ಬಿಜೆಪಿ ಈ ಬಗ್ಗೆ ಇದುವರೆಗೂ ಚಕಾರವೆತ್ತಿಲ್ಲ, ನಮ್ಮ ಸಮುದಾಯದ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ಅವರು ಸಮುದಾಯದ ಶಾಸಕ ಮನ್ನಣೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಸುರೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಕಾರ್ಯದರ್ಶಿ ಸಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿ ಟಿ.ಇ.ರಘುರಾಮ್, ಟಿ.ಎಚ್.ಮಹದೇವ, ಧರ್ಮರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಶಂಕರ್ ಸೇರಿದಂತೆ ಇತರರಿದ್ದರು.