ತುಮಕೂರು:
ನಗರದ ರೈಲ್ವೆ ನಿಲ್ದಾಣ ರಸ್ತೆಯ ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಮುಗಿಯುತಿದ್ದು, ಇದಕ್ಕಾಗಿ ಸಹಕರಿಸಿದ ನಗರದ ಶಾಸಕರು, ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ 15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಐದು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ್, ಸೋಮೇಶ್ವರಪುರಂಗೆ ಸಂಪರ್ಕ ಕಲ್ಪಿಸವ ಸುಮಾರು 1.25ಕಿ.ಮಿ ರಸ್ತೆಯನ್ನು ಮೂರುವರೆ ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿನ ನಾಗರಿಕರು ಮತ್ತು ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ರಸ್ತೆ ಒತ್ತುವರಿಯನ್ನು ಸ್ವತಹಃ ಮನೆಯ ಮಾಲೀಕರುಗಳೇ ತೆರವುಗೊಳಿಸಿಕೊಂಡಿದ್ದು, ರಸ್ತೆ ಅಭಿವೃದ್ದಿಗೆ ಪ್ರಮುಖ ಅಡ್ಡಿ ನಿವಾರಣೆಯಾದಂತಾಗಿದೆ ಎಂದರು.
ಈ ರಸ್ತೆಯು 7.5 ಮೀಟರ್ ಅಗಲವಾಗಿದ್ದು, ರಸ್ತೆಯ ಎರಡು ಬದಿ 2 ಮೀಟರ್ ಪುಟ್‍ಪಾತ್ ಜೊತೆಗೆ, ಆಟೋ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾನೀಕೆತನ ಶಾಲೆಯ ಮುಂಭಾಗದಿಂದ ಉಪ್ಪಾರಹಳ್ಳಿ ಮೇಲ್ಸೇತುವೆಯವರೆಗೆ ರಸ್ತೆ ಮಧ್ಯೆ ವಿಭಜಕ ನಿರ್ಮಾಣ ಮಾಡಲಾಗುವುದು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಸಿದ್ದವಾಗಲಿದೆ ಎಂದರು ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.
ತುಮಕೂರು ನಗರದ 15 ನೇ ವಾರ್ಡಿನ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, 24×7 ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಕೆ ಪೂರ್ಣಗೊಂಡಿದೆ. ಚರಂಡಿ ನಿರ್ಮಾಣ ಕಾರ್ಯವೂ ಮುಕ್ತಾಯವಾಗಿದ್ದು, ರಸ್ತೆ ಅಭಿವೃದ್ಧಿ ತ್ವರಿತಗತಿಯಲ್ಲಿ ಜರುಗುತಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ ನಗರದ ಸುಸಜ್ಜಿತ ವಾರ್ಡುಗಳಲ್ಲಿ ಒಂದಾಗಲಿದೆ ಎಂದರು.
ರೈಲ್ವೆ ನಿಲ್ದಾಣದ ಸುತ್ತಮುತ್ತ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ರೈಲ್ವೆ ನಿಲ್ದಾಣದ ಎದುರಿನ, ಸರಕಾರಿ ಐಬಿ ಪಕ್ಕದಲ್ಲಿ ಅವರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ನಗರಪಾಲಿಕೆ ಶೀಘ್ರವೇ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೂ ರಸ್ತೆ ಬದಿ ಯಾರಿಗೂ ತೊಂದರೆಯಾಗದ ರೀತಿ ವ್ಯಾಪಾರ ವಹಿವಾಟು ನಡೆಸಲು ಅವರಿಗೆ ಸೂಚಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಶಾಸಕರಾದ ಜಿ..ಬಿ.ಜೋತಿಗಣೇಶ್, ಪಾಲಿಕೆ ಆಯುಕ್ತರಾದ ಭೂಬಾಲನ್, ಮೇಯರ್ ಶ್ರೀಮತಿ ಫರೀಧಾ ಬೇಗಂ, ಪಾಲಿಕೆಯ ಇಂಜಿನಿಯರ್‍ಗಳಾದ ಅಶೋಕ್, ಸುಮ, ಶಿಲ್ಪ ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.
ಈ ವೇಳೆ ಸಿ.ಎಸ್.ಐ ಲೇಔಟ್ ಬಡಾವಣೆಯ ನಾಗರಿಕರಾದ ಶ್ರೀಮತಿ ಶುಭಾಷಿಣಿ ರವೀಶ್, ಕನ್ನಡ ಸೇನೆಯ ಧನಿಯಕುಮಾರ್, ಪಾಲಿಕೆ ಮತ್ತು ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.