ಗುಬ್ಬಿ:
ಕೋವಿಡ್-19 ವೈರಸ್ ಸೋಂಕಿತರ ಚಿಕಿತ್ಸೆಗೆ ತಾಲ್ಲೂಕಿನ ಕಳ್ಳಿಪಾಳ್ಯದ ಬಳಿಯ ಓಂ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಸಿದ್ದಪಡಿಸಲಾದ ಐಸ್ಯೂಲೇಷನ್ ಹಾಸಿಗೆಗಳ ಕೋವಿಡ್-19 ಕೇರ್ ಸೆಂಟರ್‍ಗೆ ಗುರುವಾರ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಗಡಿಭಾಗ ಕಳ್ಳಿಪಾಳ್ಯ ಸಮೀಪ ಹೆದ್ದಾರಿ ಬದಿಯಲ್ಲಿರುವ ಓಂ ಪ್ಯಾಲೇಸ್‍ನಲ್ಲಿನ ಎಲ್ಲಾ ವ್ಯವಸ್ಥೆಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಕಾಂಪೌಂಡ್‍ನಲ್ಲಿ ಮೂರು ಶೆಡ್ ನಿರ್ಮಿಸಿ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ವ್ಯವಸ್ಥೆ ಮಾಡಿರುವ ಬಗ್ಗೆ ಪರಿಶೀಲಿಸಿದರು. ಚಿಕಿತ್ಸೆಗೆ ಬರುವ ರೋಗಿಗಳಿಗೆ ಪೌಷ್ಠಿಕ ಆಹಾರ ನೀಡಲು ಸೂಚಿಸಲಾಗಿದೆ. ಊಟ ಮತ್ತು ತಿಂಡಿಗಳ ತಯಾರಿಕೆಗೆ ಗುಣಮಟ್ಟದ ಪದಾರ್ಥ ಬಳಕೆ ಮತ್ತು ಪೌಷ್ಠಿಕಾಂಶದ ತರಕಾರಿ ಬಳಕೆಗೆ ಸೂಚಿಸಿ ಇಡೀ ಕಲ್ಯಾಣ ಮಂಟಪವನ್ನು ಸ್ಯಾನಿಟೈಜರ್ ಮಾಡಲು ಆದೇಶಿಸಿದರು.
ಈ ಕಲ್ಯಾಣ ಮಂಟಪವನ್ನು ಕೇರ್ ಸೆಂಟರ್ ಬಳಕೆಗೆ ತಾಲ್ಲೂಕು ಆಡಳಿತ ಆಯ್ಕೆ ಮಾಡಿ 67 ಹಾಸಿಗೆಗಳನ್ನು ವ್ಯವಸ್ಥಿತವಾಗಿ ಅಳವಡಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ ತಾಲ್ಲೂಕು ಮಟ್ಟದಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಳ್ಳಲು ಎಲ್ಲಾ ತಾಲ್ಲೂಕಿನಲ್ಲಿ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ತೀವ್ರ ಸ್ವರೂಪದ ಪ್ರಕರಣಗಳನ್ನು ಚಿಕಿತ್ಸೆ ನಡೆಸಲಾಗುವುದು. ರ್ಯಾಂಡಮ್ ಪರೀಕ್ಷೆಯಲ್ಲಿ ಕಂಡಂತಹ ಮೊದಲ ಹಂತದ ಪಾಸಿಟೀವ್ ಎ ಸಿಂಥಮಿಟಿಕ್ ಪ್ರಕರಣವು ಆರೋಗ್ಯವಂತರಾಗಿ ಕಾಣುತ್ತಿದ್ದು ಯಾವುದೇ ಗುಣಲಕ್ಷಣ ಇಲ್ಲದ ಸೋಂಕಿತರ ಚಿಕಿತ್ಸೆಗೆ ಈ ಸೆಂಟರ್ ಸಿದ್ದಗೊಂಡಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಕಂದಾಯ ನಿರೀಕ್ಷಕ ರಮೇಶ್ ಇತರರು ಇದ್ದರು.