ಪಾವಗಡ:
ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಟ್ರಿಯವಾಗಿದೆ. ನೀವು ನಿಮ್ಮ ಕೆಲಸಕ್ಕೆ ನಾಲಾಯಕ್, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ಲದ ಕಾರಣದಿಂದ ತಾಲೂಕಿ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ಇಂತಹ ದುರ್ಘಟನೆಗೆ ನೇರವಾಗಿ ನೀವುಗಳೇ ಕಾರಣವೆಂದು ತಾಲೂಕು ಆಡಳಿತದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕೆಂಡಕಾರಿದರು.
ಪಾವಗಡ ಪಟ್ಟಣದ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹ್ಮ ಸ್ವಾಮಿ ದೇವಾಲಯದ ಬಳಿಯ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಅವರು, ತಹಶೀಲ್ದರ್, ತಾಪಂ ಇಒ ಹಾಗೂ ಪೊಲೀಸ್ ಇಲಾಖೆಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ಮುಂದೆ ತಲೆದಂಡ ತಪ್ಪಿದಲ್ಲ ಉಷಾರ್ ಎಂದು ಎಚ್ಚರಿಕೆ ನೀಡಿದರು.
ಪಾವಗಡ ಒಂದು ಗಡಿ ತಾಲೂಕು ಆಗಿದ್ದು ಇಲ್ಲಿ ನಿರಂತರವಾದ ತಪಾಸಣಿ ನಡೆಸಬೇಕು. ಈ ಕೆಲಸ ನೀವು ಸರಿಯಾಗಿ ನಿಭಾಯಿಸದ ಕಾರಣ ಸುತ್ತಲಿನ ಆಂಧ್ರದವರ ಒಡಾಟದಿಂದ ಇಲ್ಲಿನ ಪ್ರಕರಣಗಳು ಏರಿಕೆಯಾಗುತಿವೆ. ಹಾಗೂ ಗ್ರಾಮ ಪಂಚಾಯ್ತಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಆಶಾಕಾರ್ಯಕರ್ತೆಯರು ಯಾವುದೇ ಗ್ರಾಮಕ್ಕೆ ಹೊಸಬರು ಬಂದ ಕೂಡಲೇ ಮಾಹಿತಿ ಪಡೆದು ಕ್ವಾರಂಟೈನ್ ಮಾಡದೇ ಬೀದಿಗೆ ಬಿಟ್ಟ ಕಾರಣ ಎಲ್ಲರೂ ಇಂದು ಕೊರೊನಾ ಭೀತಿಯನ್ನು ಅನುಭವಿಸುವಂತಾಗಿದೆ ಎಂದರು.
ತಾಲೂಕು ಆಡಳಿತದ ಕಾರ್ಯವೈಕರಿ ಸಂಪೂರ್ಣ ವಿಫಲವಾಗಿದೆ, ನೀವು ಕೆಲಸಗಳು ಮಾಡಲು ನಾಲಾಯಕ್ ನಿಮಗೆ ಕೆಲಸ ಮಾಡುವ ಇಲ್ಲವೇ ಮಾಡಿಸುವ ವಿಧಾನ ಗೊತ್ತಿಲ್ಲದಿದ್ದರೆ ಏನು ಮಾಡುವುದು. ಆಗಾಗಿ ಮೊದಲು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ತಿಳಿದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು. ಹೀಗೆ ಮುಂದುವರೆದರೆ ಕೊರೊನಾ ಮಹಾಮಾರಿಯ ವಿರುದ್ಧ ಜನರನ್ನು ರಕ್ಷಿಸುವುದು ಹೇಗೆ ಎಂದು ತಹಶೀಲ್ದರ್ ವರದರಾಜು, ತಾಪಂ ಇಒ ತಾಲೂಕು ವೈದ್ಯಾಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು.
ತಾಲೂಕಿನಲ್ಲಿ ಕೊವಿಡ್ ಪ್ರಕರಣಗಳು ಬೆಳಕಿಗೆ ಬಂದು ಸೀಲ್‍ಡೌನ್ ಆದ ಪ್ರದೇಶಕ್ಕೆ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಬೇಕು, ಅಲ್ಲಿ ಹೊಂ ಕ್ವಾರಂಟೈನ್‍ನಲ್ಲಿರುವ ಜನತೆಗೆ ಪ್ರತಿದಿನದ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತದ ವತಿಯಿಂದಲೇ ಪೂರೈಕೆ ಮಾಡಬೇಕು. ಹಲವು ಪ್ರದೇಶಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಜನತೆಗೆ ದಿನಸಿ ಪದಾರ್ಥಗಳು ಸಿಗದೇ ಅವರು ಗೋಳಾಡಿದ್ದುಂಟು. ಏಕೆಂದರೆ ಅಲ್ಲಿ ತಾಲೂಕು ಆಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಆ ಘಟನೆಗಳು ನಡೆದಿವೆ. ಮತ್ತೆ ಎಲ್ಲೇ ಆಗಲಿ ಅಂತಹ ಘಟನೆಗಳು ಮರುಕಳಿಸಿದರೆ ಮುಂದಾಗುವ ಆನಾಹುತಕ್ಕೆ ನೀವೆ ಕಾರಣರೆಂದರು.
ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ಸಮುದಾಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಪ್ರಕರಣಗಳು ಹೆಚ್ಚಾಗದಂತೆ ಜಾಗೃತಿವಹಿಸಬೇಕು, ತಾಲೂಕಿನಲ್ಲಿ ಜಿಲ್ಲಾಡಳಿತದವತಿಯಿಂದ ಯಾವುದೇ ಸೂಚನೆ ಇಲ್ಲದಿದ್ದರು ಸಳೀಯವಾಗಿ ಜನತೆಯ ಒಮ್ಮತದಿಂದ ದಿನಬಿಟ್ಟು ದಿನ ಲಾಕ್‍ಡೌನ್ ಜಾರಿಯಾಗಿದ್ದು ಉತ್ತಮ ಬೆಳವಣಿಗೆಯಾಗಿದ್ದು, ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಿ ಕೊರೊನಾ ತಡೆಗಟ್ಟಲು ಆಗತ್ಯ ಕ್ರಮಕೈಗೊಳ್ಳಿ ಎಂದರು.=
ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು ತಮ್ಮ ತಮ್ಮ ಗ್ರಾಮಗಳ ಪ್ರತಿ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಯಾವುದೇ ರೋಗ ಲಕ್ಷಣ ಕಂಡುಬಂದರೆ ತಕ್ಷಣವೇ ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಕಾರ್ಯನಿರ್ವಣಾಧಿಕಾರಿ ಶುಭಾಕಲ್ಯಾಣ್, ಡಿಹೆಚ್‍ಒ ನಾಗೇಂದ್ರಯ್ಯ, ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್, ತಾಲೂಕು ನೋಡಲ್ ಆಧಿಕಾರಿ ಮಹಿಮಾ, ತಹಶೀಲ್ದರ್ ವರದರಾಜು ಉಪಸ್ಥಿತರಿದ್ದರು.