ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಮೂಲದ ವೃದ್ಧನೊಬ್ಬ ಬೆಂಗಳೂರಿನಿಂದ ಸ್ವಂತ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದು, ನಂತರ ಗ್ರಾಮಕ್ಕೆ ಪ್ರವೇಶನೀಡದ ಕಾರಣ ಬೆಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಮರಣಹೊಂದಿದ್ದಾನೆ ಎಂಬ ಸುದ್ದಿಯಿಂದ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.
ತಾಲ್ಲೂಕಿನ ಕುಪ್ಪೂರು ಪಂಚಾಯಿತಿಯ ದಿಬ್ಬದಹಳ್ಳಿಯ ಮೂಲದ ರಾಜಣ್ಣ(65) ಎಂಬುವರು ಬೆಂಗಳೂರಿನಲ್ಲಿ ತಮ್ಮ ಮಕ್ಕಳ ಮನೆಯಲ್ಲಿದ್ದರು. ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದ ಕಾರಣಕ್ಕೆ ಊರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಕೆಲವು ಸಮಯ ಇರಲು ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಬುಧವಾರ ಬೆಂಗಳೂರಿನಿಂದ ಚಿ.ನಾ. ಹಳ್ಳಿಗೆ ಬಂದು, ಇಲ್ಲಿಂದ ದಿಬ್ಬದಹಳ್ಳಿಗೆ ತೆರಳಲು ವಾಹನವಿರದ ಕಾರಣ ನಡೆದುಕೊಂಡೆ ಪಯಣಬೆಳೆಸಿದರು. ಆದರೆ ಊರಿನ ಸಮೀಪದ ಕುರುಬಳ್ಳಿಗೆ ಬಂದಾಗ ವಿಷಯತಿಳಿದ ಈತನ ನೆಂಟರು ಇವರನ್ನು ತಮ್ಮ ಮನೆಗೆ ಬರುವುದಕ್ಕೆ ಅಸಮ್ಮತಿ ವ್ಯಕ್ತವಾದ ಹಿನ್ನಲೆಯಲ್ಲಿ ಕುರುಬರಳ್ಳಿಯ ತಂಗುದಾಣದಲ್ಲಿಯೇ ವಿಶ್ರಾಂತಿ ಪಡೆದರು.
ಈ ಸಮಯದಲ್ಲಿ ಈ ಗ್ರಾಮದ ಕೆಲವರೊಂದಿಗೆ ಮಾತನಾಡಿದ್ದರು. ಇವರಿಗೆ ಉಬ್ಬಸವಿದ್ದಕಾರಣ ತೀವ್ರ ನಿತ್ರಾಣರಾಗಿದ್ದ ಕಾರಣ ಗ್ರಾಮಸ್ಥರು ಕೋವಿಡ್19 ಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಕೋವಿಡ್19 ವಾಹನದಲ್ಲಿ ಇವರನ್ನು ತಕ್ಷಣ ತುಮಕೂರಿನಾಸ್ಪತ್ರೆಗೆ ಕೊಂಡೊಂಯ್ಯಲಾಯಿತು.
ಆದರೆ ಅಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ್ದಾರೆ ಎಂಬ ವದಂತಿ ಗ್ರಾಮಗಳಲ್ಲಿ ದಟ್ಟವಾಗಿ ಹರಡಿದೆ. ಇದರಿಂದ ಇವರನ್ನು ಮಾತನಾಡಿಸಿದ ಜನರಿಗೆ ಆತಂಕ ತಲೆದೂರಿದೆ. ಈತನು ಬೆಂಗಳೂರಿನಿಂದ ಬಂದು ಚಿಕ್ಕನಾಯಕನಹಳ್ಳಿಯಲ್ಲಿ ಇಳಿದು ನಂತರ ಕುರುಬರಹಳ್ಳಿಗೆ ನಡೆದುಕೊಂಡುಬಂದು ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿರುವ ಹಿನ್ನಲೆಯಲ್ಲಿ ಇವರಿಗೆ ಕೊರೊನಾ ಸೋಂಕು ಇದಯೇ ಎಂಬ ಬಗ್ಗೆ ಈವರೆಗೂ ಮಾಹಿತಿಯಿಲ್ಲ. ಪ್ರಯಾಣದ ನಡುವೆ ಇವರಿಗೆ ಎಲ್ಲಿಯೂ ಆರೋಗ್ಯದ ಪರೀಕ್ಷೆ ನಡೆಸಲಿಲ್ಲವೇಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಪ್ರಕರಣ ನಡೆದ ಮಾರನೇದಿನ ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿದ್ದರೂ ಸ್ಥಳೀಯ ಆಡಳಿತ ಈ ಪ್ರಕರಣದ ಮಾಹಿತಿಯನ್ನು ಮಾಧ್ಯಮದವರಿಗೂ ಹಂಚಿಕೊಂಡಿಲ್ಲ. ಜೊತೆಗೆ ವ್ಯಕ್ತಿಯನ್ನು ಕೊವಿಡ್ ವಾಹನದಲ್ಲಿ ಕೊಂಡೊಯ್ದಿದ್ದರೂ ಈವರೆಗಿನ ಹಾಗೂ ನಂತರದ ವಿವರಣೆಯನ್ನು ಯಾರಿಗೂ ತಿಳಿಸಿದೆ ಮುಚ್ಚಿಡುವ ಯತ್ನ ನಡೆಸಿ ಸಂಬಂಧಿಸಿದ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಠಿಗೆ ಕಾರಣವಾಗಿದೆ. ಈ ವ್ಯಕ್ತಿ ತೆರಳಿದ ಗ್ರಾಮಗಳಲ್ಲಿ ಈವರೆಗೆ ಯಾವುದೇ ಸೋಂಕು ಬಂದಿಲ್ಲದ ಕಾರಣ ನೆಮ್ಮದಿಯಿಂದಿದ್ದ ಗ್ರಾಮಸ್ಥರಿ ಆತಂಕಕ್ಕೊಳಗಾಗಿದ್ದಾರೆ. ತಾಲ್ಲೂಕುಆಡಳಿತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವ್ಯಕ್ತಿ ಮೃತನಾಗಿದ್ದಾನಯೇ, ಇಲ್ಲವೇ ಸೋಂಕಿತನೇ ಎಂಬ ಸತ್ಯವನ್ನು ಹೊರಗೆಡವಬೇಕಿದೆ.