ತುಮಕೂರು:
ವಸತಿಹೀನ ಅಲೆಮಾರಿ ಜನಾಂಗದವರನ್ನು ಗುರುತಿಸಿ ಪಟ್ಟಿ ತಯಾರಿಸುವಲ್ಲಿ ಪಿಡಿಓಗಳ ಕಾರ್ಯ ತೃಪ್ತಿ ತಂದಿಲ್ಲ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಖುದ್ದು ಸರ್ವೆ ನಡೆಸಿ ಯಾರೊಬ್ಬ ಫಲಾನುಭವಿಗೂ ವಸತಿ ತಪ್ಪದಂತೆ ಕ್ರಮವಹಿಸಲು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯಿಂದ 1390 ಫಲಾನುಭವಿಗಳನ್ನು ಗುರುತಿಸಿರುವುದಾಗಿ ಪಟ್ಟಿ ಸಿದ್ದವಾಗಿದೆ. ಆದರೆ ವಾಸ್ತವದಲ್ಲಿ ಎರಡು ಪಟ್ಟು ಫಲಾನುಭವಿಗಳು ಸಿಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅರ್ಹರನ್ನು ಗುರುತಿಸಿ ಏಳು ದಿನದಲ್ಲಿ ಪಟ್ಟಿ ತಯಾರಿಸಿ ತಾಲ್ಲೂಕು ಪಂಚಾಯಿತಿಗೆ ಒಪ್ಪಿಸಬೇಕು ಎಂದು ತಿಳಿಸಿದರು.
ನಮ್ಮಲ್ಲಿ ಅಲೆಮಾರಿಗಳು, ಬುಡಕಟ್ಟು ಜನಾಂಗದ ಪೈಕಿ ಗೊಲ್ಲ ಸಮಾಜವೇ ಅತಿ ಹೆಚ್ಚು ಕಂಡು ಬರುತ್ತದೆ. ಈಗಾಗಲೇ ಹಲವು ವಸತಿ ಯೋಜನೆಯಲ್ಲಿ ಮನೆ ನೀಡಲಾಗಿದೆ. 7 ಸಾವಿರಕ್ಕೂ ಅಧಿಕ ಮನೆಗಳನ್ನು ಒದಗಿಸಲಾಗಿದೆ. ಆದರೂ ಸಾಮಾನ್ಯ ಮೀಸಲಿನಲ್ಲಿ ನೀಡಿದ ಮನೆಗಳ ಪೈಕಿ ಸಾಕಷ್ಟು ಮನೆಗಳಿಗೆ ಅನುದಾನ ಪೂರ್ಣ ಬಂದಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ದೇವರಾಜು ಅರಸು ವಸತಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿರುವ ಗೊಲ್ಲ, ದೊಂಬಿದಾಸರು, ಹಂದಿಜೋಗರು, ಹಳವ ಹೀಗೆ ಅನೇಕ ಜನಾಂಗವನ್ನು ಗುರುತಿಸುವಲ್ಲಿ ತಪ್ಪು ನಡೆಯದಂತೆ ಸರ್ವೆ ನಡೆಸಬೇಕು. ಈ ಜತೆಗೆ ಸ್ಥಳೀಯ ಮುಖಂಡರ ಮಾತುಗಳಿಗೆ ಹೆಚ್ಚು ನಿಗಾ ಕೊಡದೆ ಪಕ್ಷಾತೀತವಾಗಿ ಪಟ್ಟಿ ತಯಾರಿಸಿ ಯಾರೊಬ್ಬರೂ ನನಗೆ ಮನೆ ಸಿಕ್ಕಿಲ ಎಂದು ದೂರು ತರಬಾರದು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಂದಲ್ಲಿ ಪಿಡಿಓಗಳು ಚುರುಕಿನ ಕೆಲಸ ಮಾಡಬೇಕು. ನೀರಿನ ವಿಚಾರದಲ್ಲಿ ಸಮಸ್ಯೆ ಕಂಡಲ್ಲಿ ಬೋರ್‍ವೆಲ್ ಕೊರೆಸಲಾಗಿದೆ. ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಅನುಸರಿಸಿದ ಅಧಿಕಾರಿಗಳು ಧೋರಣೆಗೆ ನನ್ನ ಬಳಿ ದೂರು ಬರುತ್ತಿದೆ. ಬಿದರೆ ಪಂಚಾಯಿತಿಯಲ್ಲಿ ಈ ಸಮಸ್ಯೆ ಕಂಡುಬಂದಿದೆ. ಆರು ತಿಂಗಳಾದರೂ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದ ಶಾಸಕರು ಮಡೇನಹಳ್ಳಿ ರಸ್ತೆಗೆ 95 ಲಕ್ಷ ರೂಗಳ ನೀಡಿ ಒಂದು ವರ್ಷವಾದರೂ ಕೆಲಸ ಶುರು ಮಾಡಲು ಪಿಡಿಓ ಬೇಜವಾಬ್ದಾರಿ ತೋರಿದ್ದಾರೆ. ಅವರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ನನಗೆ ಶಾಪ ಹಾಕಿದ್ದಾರೆ ಎಂದು ತಿಳಿಸಿದರು.
ನೀರಿನ ವ್ಯವಸ್ಥೆಗೆ ಪ್ರತಿ ಗ್ರಾಮದಲ್ಲೂ ಸಿಸ್ಟನ್ ಅಳವಡಿಸಿರುವುದು ವ್ಯರ್ಥವಾಗಿದೆ. ಈ ಬಗ್ಗೆ ಕ್ರಮವಹಿಸಿ ಈ ಸಿಸ್ಟನ್ ಬಳಸಿ ನೀರು ಒದಗಿಸುವಲ್ಲಿ ಶೀಘ್ರ ಕ್ರಮ ಬಳಸಿಕೊಳ್ಳಬೇಕು.
ನೀರು ಒದಗಿಸುವ ಮುನ್ನ ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಕಚೇರಿಗೆ ಶೇ.10 ರಷ್ಟು ಹಣ ನೀಡಬೇಕು ಎನ್ನುವ ಮಾನದಂಡ ಸರಿಯಲ್ಲ. ಬೆಸ್ಕಾಂ ಇಂಜಿನಿಯರ್‍ಗಳು ನೀರಿನ ವಿಚಾರದಲ್ಲಿ ವಿಳಂಬ ಅನುಸರಿಸದೇ ತುರ್ತು ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದ ಅವರು ಅಧಿಕಾರಿಗಳು ಜವಾಬ್ದಾರಿಯಿಂದ ವಿಮುಕ್ತಿಗೊಳ್ಳುವ ಹೇಳಿಕೆ ನೀಡದೇ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ಸಲಹೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮೀಸಲಿರುವ 15 ನೇ ಹಣಕಾಸು ಯೋಜನೆಯ ಹಣವನ್ನು ಮೊದಲು ನೀರು ಒದಗಿಸಲು ಬಳಸಿಕೊಂಡು ಈ ಹಿಂದೆ ಬಳಸಿ ನೀರು ಹಿಂಗಿದ ಬೋರ್‍ನಿಂದ ಹೊರತೆಗೆದ ಪಂಪ್ ಮೋಟಾರ್‍ಗಳನ್ನು ಮತ್ತೆ ಮರುಬಳಕೆಗೆ ಒತ್ತು ನೀಡಬೇಕು ಎಂದ ಸೂಚಿಸಿದ ಅವರು ತಾಲ್ಲೂಕಿನಲ್ಲಿ 146 ಕೋವಿಡ್ ಪ್ರಕರಣ ದೃಢಗೊಂಡಿದೆ. ಈವರೆವಿಗೆ 83 ಕಂಟೈನ್ಮೆಂಟ್ ಏರಿಯಾಗಳನ್ನು ಗುರುತಿಸಲಾಗಿದೆ.
ಇಲ್ಲಿ ಕೆಲಸ ಮಾಡುವ ಪಿಡಿಓಗಳು ಮತ್ತು ಆಡಳಿತಾಧಿಕಾರಿಗಳು ಸೋಂಕಿರ ಕುಟುಂಬ ಹಾಗೂ ಪ್ರಾಥಮಿಕ ಸಂಪರ್ಕದವರ ಹೋಂ ಕ್ವಾರಂಟೈನ್‍ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಜತೆಗೆ ಬೆಂಗಳೂರಿನಿಂದ ಆಗಮಿಸುವವರ ಬಗ್ಗೆ ನಿಗಾವಹಿಬೇಕು. ಅಂತಹವರನ್ನು ಕೂಡಲೇ ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್, ತಾಪಂ ಇಒ ನರಸಿಂಹಯ್ಯ, ಸಿಪಿಐ ಸಿ.ರಾಮಕೃಷ್ಣಯ್ಯ, ವಸತಿ ನೋಡಲ್ ಅಧಿಕಾರಿ ಸತೀಶ್ ಇದ್ದರು.