ತುಮಕೂರು:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಸೆಪ್ಟೆಂಬರ್ 1 ರಿಂದ ಬಚ್ಚಲು ಗುಂಡಿ(ಸೋಕ್ ಪಿಟ್) ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಸೂಚನೆಯ ಮೇರೆಗೆ ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಅಣಬೆ ಬೇಸಾಯ, ಪೌಷ್ಠಿಕ ತೋಟ ನಿರ್ಮಾಣ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು.
ನರೇಗಾ ಯೋಜನೆಯಡಿ ಹೊಸದಾಗಿ ಸೇರ್ಪಡೆಗೊಂಡಿರುವ ಬಚ್ಚಲು ಗುಂಡಿ (ಸೋಕ್ ಪಿಟ್) ವೈಯಕ್ತಿಕ ಕಾಮಗಾರಿಗೆ 17000/- ರೂ., ಅಣಬೆ ಬೇಸಾಯ (ಸಮುದಾಯ ಆಧಾರಿತ) ಕಾಮಗಾರಿಗೆ 95000/- ರೂ., ಪೌಷ್ಠಿಕ ತೋಟ ನಿರ್ಮಾಣ ವೈಯಕ್ತಿಕ ಕಾಮಗಾರಿಗೆ 2391/- ರೂ. ಹಾಗೂ ಸಮುದಾಯ ಕಾಮಗಾರಿಗೆ 37391/- ರೂ.ಗಳನ್ನು ನೀಡಲಾಗುವುದು. ಗ್ರಾಮೀಣ ಭಾಗದ ಜನರು ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ನರೇಗಾ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಕುರಿತಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಹಾಗೂ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕಅಧಿಕಾರಿಗಳು, ಸಹಾಯಕನಿರ್ದೇಶಕರು(ಗ್ರಾಮೀಣಉದ್ಯೋಗ), ಐಇಸಿ ಸಂಯೋಜಕರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಬಿಎಫ್‍ಟಿಗಳು ಹಾಗೂ ಕಾಯಕ ಬಂಧುಗಳು ಕಾರ್ಯನಿರ್ವಹಿಸಲಿದ್ದಾರೆ.
ಗ್ರಾಮೀಣ ಪ್ರದೇಶದ ಚರಂಡಿಗಳಲ್ಲಿ ಕೊಳಚೆ ನೀರು ಸುಗಮವಾಗಿ ಹರಿಯದೆ ಪರಿಸರಕ್ಕೆ ಹಾನಿಯುಂಟಾಗುವುದನ್ನು ತಪ್ಪಿಸುವ ಹಾಗೂ ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸೋಕ್ ಪಿಟ್‍ಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಮಧುಗಿರಿ ನಂಬರ್ 1 :
ಜಿಲ್ಲೆಯ 10 ತಾಲ್ಲೂಕುಗಳಿಂದ ಈವರೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆಗಸ್ಟ್ 28ರವರೆಗೆ 37,47,258 ಮಾನವ ದಿನಗಳ ಸೃಜನೆ ಮಾಡಿದ್ದು, ಮಧುಗಿರಿ ತಾಲ್ಲೂಕು ನರೇಗಾ ಯೋಜನೆಯ ಅನುಷ್ಟಾನದಲ್ಲಿ ಎಂದಿನಂತೆ ಈ ಬಾರಿಯೂ ಮೊದಲನೇ ಸ್ಥಾನದಲ್ಲಿದ್ದರೆ, ತುಮಕೂರು ತಾಲ್ಲೂಕು ಕೊನೆಯಸ್ಥಾನದಲ್ಲಿದೆ ಎಂದವರು ತಿಳಿಸಿದರು.