ತುಮಕೂರು:

      ಒಳಮೀಸಲಾತಿ ಪರ್ಗೀಕರಣ ಸಂಬಂಧ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ್ಯಾ. ಎ.ಜೆ. ಸದಾಶಿವ ಆಯೋಗ ಜಾರಿ ಹಕ್ಕೋತ್ತಾಯ ಸಮಿತಿ ವತಿಯಿಂದ ನಗರದಲ್ಲಿ ಅಹೋರಾತ್ರಿ ಪ್ರತಿಭಟನೆಯಲ್ಲಿ ನಡೆಸಲಾಗುತ್ತಿದೆ.

      ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಸಮಿತಿಯ ಪದಾಧಿಕಾರಿಗಳು ಒಳಮೀಸಲಾತಿ ವರ್ಗೀಕರಣಕ್ಕಾಗಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು, ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗಾಗಿ ಬಹಳ ದಿನದಿಂದ ಹೋರಾಟ ನಡೆಯುತ್ತಲೇ ಇದೆ. ನ್ಯಾಯುಯತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಸ್ಪಂದನೆ ಮಾಡದಿದ್ದರೆ ಆ ಸಮುದಾಯಗಳಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳನ್ನು ತಕ್ಷಣದಿಂದ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

      ಸದಾ ಕಾಲ ಈ ಬೇಡಿಕೆಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಈ ನ್ಯಾಯಯುತ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವ ಅವಶ್ಯಕತೆ ಇದೆ ಎಂದರು.
ಈ ಬೇಡಿಕೆ ದಲಿತ ಸಮುದಾಯದ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ, ದಲಿತ ಸಮುದಾಯದಲ್ಲಿ ಇರುವ ಹಲವಾರು ಉಪಪಂಗಡಗಳು, ಶೋಷಣೆಗೆ ಒಳಗಾಗಿರುವ ಎಲ್ಲರಿಗೂ ಈ ವರದಿ ಅನುಷ್ಟಾನದ ಅಗತ್ಯವಿದೆ ಎಂದರು.

      ದಲಿತ ಸಮುದಾಯ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತಾ ಬಂದಿದೆ. ಸಂವಿಧಾನ ಬದ್ಧವಾದ ಹಕ್ಕುಗಳನ್ನು ಗಳಿಸಲು ತೀವ್ರವಾದ ಹೋರಾಟ ಮಾಡಬೇಕಾಗಿದೆ ಎಂದರು.

      ಯಾವುದೇ ರೀತಿಯ ಒಳಸಂಚು, ರಾಜಕೀಯ ಪಕ್ಷಗಳ ಚಿತಾವಣೆಗಾಗಲೀ ಯಾರೂ ಕೂಡಾ ಹೆದರಬಾರದು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ಅಗತ್ಯತೆ ಇದ್ದೇ ಇರುತ್ತದೆ. ಈ ಹೋರಾಟವನ್ನು ಎಲ್ಲರೂ ಜತೆಗೂಡಿ ಮಾಡೋಣ. ಈ ಅಹೋರಾತ್ರಿ ಧರಣಿಗೆ ನನ್ನ ಬೆಂಬಲ ಸದಾಕಾಲ ಇರುತ್ತದೆ ಎಂದರು. ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ತಾಲ್ಲೂಕು ಮಟ್ಟದಲ್ಲೂ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.  ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಸಂಖ್ಯೆಯನ್ನೂ ಸಹ ಹೆಚ್ಚಿಸಬೇಕಾಗಿದೆ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

     ದಲಿತ ಮುಖಂಡರಾದ ವಾಲೆಚಂದ್ರಯ್ಯ ಮಾತನಾಡಿ, ಒಳಮೀಸಲಾತಿ ವರ್ಗೀಕರಣ ಜಾರಿಯಾಗಬೇಕು. ನಾವು ಈ ದೇಶದ ಮೂಲ ವಾಸಿಗಳು. ನಮಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದರು.

      ಒಳಮೀಸಲಾತಿ ವರ್ಗೀಕರಣ ಜಾರಿಯಾಗದಿದ್ದರೆ ನಾವೆಲ್ಲಾ ಪ್ರಾಣ ತ್ಯಾಗ ಮಾಡಲೂ ಸಿದ್ದರಾಗಿದ್ದೇವೆ. ಮಾದಿಗ ಜನಾಂಗವನ್ನು ಕೇವಲ ವೋಟ್ ಬ್ಯಾಂಕ್ ಮಾತ್ರ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಸೌಲಭ್ಯ ಒದಗಿಸಿಕೊಡುವಲ್ಲಿ ಮಾತ್ರ ನಿರ್ಲಕ್ಷ್ಯ ತೋರಿವೆ ಎಂದು ದೂರಿದರು.

     ನಮ್ಮ ಜನಾಂಗ ಬಹಳ ಹಿಂದುಳಿದಿದೆ. ಮಾದಿಗ ಜನಾಂಗ ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷಗಳಿಗೂ ಮತ ಹಾಕಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಮುಂದಾಗಲೇಬೇಕು ಎಂದು ಒತ್ತಾಯಿಸಿದರು.

      ಅಹೋರಾತ್ರಿ ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮೆಳೆಕಲ್ಲಹಳ್ಳಿ, ಜೆಸಿಬಿ ವೆಂಕಟೇಶ್, ರಾಮಯ್ಯ, ಮೋಹನ್ ಪರಮೇಶ್, ಶಿವರಾಜು, ಬಂಡೆ ಕುಮಾರ್, ಮುನಿರಾಜು, ರಾಮಮೂರ್ತಿ, ಕೆಂಪರಾಜು ಮತ್ತಿತರರು ಪಾಲ್ಗೊಂಡಿದ್ದರು.

(Visited 7 times, 1 visits today)