ದೆಹಲಿ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.
ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ ನಿರ್ಗಮಿಸಿದ ಕೇಜ್ರಿವಾಲ್ ಮೇಲೆ ದೆಹಲಿಯ ನಾರಾಯಣ ಎಂಬಲ್ಲಿನ ಸರಿಸುಮಾರು 40 ವರ್ಷ ವಯಸ್ಸಿನ ಅನಿಲ್ ಕುಮಾರ್ ಶರ್ಮಾ ಎಂಬಾತ ದಾಳಿ ನಡೆಸಿದ್ದಾನೆ. ಆತನನ್ನು ಐಪಿ ಎಸ್ಟೇಟ್ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಕುಮಾರ್ ಶರ್ಮಾ ಸಿಗರೇಟ್ ಪ್ಯಾಕೆಟ್ನಲ್ಲಿ ಖಾರದ ಪುಡಿಯನ್ನು ತುಂಬಿಕೊಂಡು ತಂದಿದ್ದ. ಪತ್ರವೊಂದನ್ನು ನೀಡಲು ಕಾದು ಕುಳಿತಿದ್ದ. ಕೇಜ್ರಿವಾಲ್ ಅವರು ಕಚೇರಿಯಿಂದ ಬರುತ್ತಲೇ ಅವರ ಕಾಲಿಗೆರಗಿದ ಅನಿಲ್ನನ್ನು ಕೇಜ್ರಿವಾಲ್ ಬಗ್ಗಿ ಮೇಲೆತ್ತಲು ಪ್ರಯತ್ನಿಸಿದರು. ಆಗ ಅನಿಲ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ್ದಾನೆ. ಆದರೆ, ಕೇಜ್ರಿವಾಲ್ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲ. ಕಣ್ಣಿಗೆ ಕನ್ನಡಕ ಹಾಕಿದ್ದರಿಂದ ಅವರು ಪಾರಾಗಿದ್ದಾರೆ. ಆದರೆ, ತಮ್ಮ ಕಣ್ಣನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಕನ್ನಡಕ ನೆಲದ ಮೇಲೆ ಬಿದ್ದು ಒಡೆದಿದೆ. ಅನಿಲ್ನ ಈ ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.