ಮಧುಗಿರಿ:

      ಪಟ್ಟಣದಲ್ಲಿ ಇತ್ತೀಚೆಗೆ ಬೊಲೇರೋ ವಾಹನ ಅಡ್ಡಗಟ್ಟಿ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

      ಪಟ್ಟಣದ ಕೆ.ಆರ್ ಬಡಾವಣೆಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಸಮೀಪ ನಿವಾಸಿ ಕಾರು ಚಾಲಕ ರಾಕೇಶ್ (26), ಗೌರಿಬಿದನೂರು ರಸ್ತೆಯ ಸಮೀಪದ ನಿವಾಸಿ ಉಪೇಂದ್ರ (22) ಮತ್ತು ಕರಡಿಪುರ ನಿವಾಸಿ ಭರತ್ (22) ಬಂದಿತ ಆರೋಪಿಗಳು.

      ಘಟನೆಯ ವಿವರ: ಸೆ. 24 ರಂದು ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಅಮರನಾಥ ಎಂಬುವವರ ಬೊಲೆರೋ ವಾಹನವನ್ನು ಮಧುಗಿರಿಯ ಅವಲಕ್ಕಿ ಮಿಲ್ ಸಮೀಪ ವಾಹನದಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ವಾಹನ ಅಡ್ಡಗಟ್ಟಿ ಅಮರನಾಥರವರನ್ನು ಥಳಿಸಿ 10 ಸಾವಿರ ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು. ಇದರ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

      ಇತ್ತೀಚೆಗೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಬೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಡಿವೈಎಸ್ಪಿ ಪ್ರವೀಣ್ ಮಾರ್ಗದರ್ಶನದಲ್ಲಿ, ಸಿಪಿಐ ಸರ್ದಾರ್ ನೇತೃತ್ವದಲ್ಲಿ ಅಪರಾಧಿಗಳ ಪತ್ತೆಗೆ ತಂಡವನ್ನು ರಚಿಸಲಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದು, ಬಂದಿತರಿಂದ ಅಶೋಕ್ ಲೈಲ್ಯಾಂಡ್ ವಾಹನ, 7 ಸಾವಿರ ನಗದು ಮತ್ತುಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಸರ್ದಾರ್, ಪಿಎಸ್‍ಐ ಮಂಗಳಗೌರಮ್ಮ, ಎಎಸ್‍ಐ ಶಿವಕುಮಾರ್, ಸಿಬ್ಬಂದಿಗಳಾದ ಕುಮಾರ್, ಚಂದ್ರಮೋಹನ್, ಸಾದಿಕ್ ಪಾಷ, ರವರ ತಂಡವನ್ನು ಎಸ್.ಪಿ. ಕೆ. ವಂಶಿಕೃಷ್ಣ ಅಭಿನಂದಿಸಿದ್ದಾರೆ.

(Visited 9 times, 1 visits today)