ತುಮಕೂರು:
ಜಿಲ್ಲೆಯಲ್ಲಿ ಅಕ್ಟೋಬರ್ 4ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯು(ಕೆ.ಎ.ಆರ್.ಟೆ.ಇ.ಟಿ) ಸುರಕ್ಷಿತ ಹಾಗೂ ಯಶಸ್ವಿಯಾಗಿ ಜರುಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಕ್ಟೋಬರ್ 4ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ನಿಗಾವಹಿಸಬೇಕು. ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನು (ಆರೋಗ್ಯ ತಪಾಸಣಾ ಕೌಂಟರ್)ನಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯಿಂದ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು ಎಂದರು.
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಸಿಂಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜಿಲ್ಲಾ “ಕೋವಿಡ್ ಕೇರ್ ಸೆಂಟರ್”ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಮೇಲ್ವಿಚಾರಕರಾಗಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು. ಕೋವಿಡ್-19 ಪಾಸಿಟಿವ್ ಅಭ್ಯರ್ಥಿ ತಾಲ್ಲೂಕು ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದರೆ ಅಂತಹವರನ್ನು ಜಿಲ್ಲಾ ಕೋವಿಡ್ ಕೇರ್ ಸೆಂಟರ್‍ಗೆ ಕರೆತರಲು ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದರು.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 19 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 5 ಸೇರಿದಂತೆ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಕಾಲಕ್ಕೆ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಡಿಹೆಚ್‍ಓ ಡಾ: ನಾಗೇಂದ್ರಪ್ಪ ಅವರು ಪರೀಕ್ಷಾ ದಿನದಂದು 108 ವಾಹನ ಸೌಲಭ್ಯವನ್ನು ಒದಗಿಸಲಾಗುವುದು ಹಾಗೂ ಎಲ್ಲಾ ವೈದ್ಯಕೀಯ ಮುಂಜಾಗ್ರತೆಯನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಡಿಡಿಪಿಐಗಳಾದ ನಂಜಯ್ಯ, ರೇವಣಸಿದ್ದಪ್ಪ, ಬಿಇಓಗಳು, ಮತ್ತಿತರರು ಹಾಜರಿದ್ದರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9448999352ರಲ್ಲಿ ಸಂಪರ್ಕಿಸುವುದು.