ಹುಳಿಯಾರು:

      ಚಿಕ್ಕ ನಾಯಕನಹಳ್ಳಿ ತಾಲೂಕಿನ ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳ ಹವ್ಯಾಸಿ ಚಾರಣಿಗರು ಪ್ರಸಕ್ತ ಸಾಲಿನ ಚಾರಣವನ್ನು ಭಾರತದ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾದ ಬರ್ಕಣ ಜಲಪಾತಕ್ಕೆ 2 ದಿನಗಳ ಚಾರಣ ಶಿಬಿರವನ್ನು ಅಕ್ಟೋಬರ್ 3 ಮತ್ತು 4 ರಂದು ಹಮ್ಮಿಕೊಂಡಿದ್ದಾರೆ.

      ದಶಕದ ಹಿಂದೆ ನೆಹರು ಯುವ ಕೇಂದ್ರ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಏರ್ಪಡಿಸಿದ್ದ ಸಾಹಸ ಚಾರಣ ಶಿಬಿರದಿಂದ ಈ ತಂಡದ ಚಾರಣದ ಹವ್ಯಾಸ ಆರಂಭವಾಗಿದ್ದು ಪ್ರತಿವರ್ಷ ಒಂದು ಚಾರಣದಂತೆ ಇಲ್ಲಿಯವರೆವಿಗೆ ಇಪ್ಪತ್ತಕ್ಕೂ ಹೆಚ್ಚು ಚಾರಣ ಶಿಬಿರ ಸಂಘಟಿಸಿದೆ.

      ಇವುಗಳಲ್ಲಿ ಬುರುಡೆಜೋಗ, ಅನಡ್ಕ, ಬಲ್ಲಾಳರಾಯನದುರ್ಗ, ಅರಿಶಿನಗುಂಡಿ, ಹಿಡ್ಲುಮನೆ, ದೇವಕಾರು, ಭಂಡಾಜೆ, ಕೊಡಚಾದ್ರಿ, ಕೂಡ್ಲುತೀರ್ಥ, ಬೆಳ್ಳಿಗುಂಡಿ ಪ್ರಮುಖವಾಗಿದ್ದಾಗಿದ್ದು ಬೀಚ್ ಟ್ರಕ್, ಕೇರಳದ ವಹಿನಾಡು ಚಾರಣ ವಿಶೇಷವಾಗಿದ್ದಾಗಿದೆ.

      ಸರ್ಕಾರದ ಹಾಗೂ ದಾನಿಗಳ ಧನಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಚಾರಣ ಕೈಗೊಳ್ಳುತ್ತಿರುವ ಈ ತಂಡ ಈ ಭಾರಿ ವಿಶೇಷ ಎನ್ನುವಂತೆ ಭಾರತದ ಅತ್ಯಂತ ಎತ್ತರದ ಹತ್ತು ಜಲಪಾತಗಳಲ್ಲಿ ಒಂದಾದ ಬರ್ಕಣ ಜಲಪಾತಕ್ಕೆ ಚಾರಣ ಹೋಗಲಿದೆ. ಈ ಜಲಪಾತವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದ್ದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ.

      ಹುಳಿಯಾರಿನಿಂದ ಎಚ್.ಎಸ್.ಶಿವಕುಮಾರ್, ಎಚ್.ಬಿ.ಶ್ರೀನಿವಾಸಪ್ರಸಾದ್, ಕೆ.ಸಿ.ರಂಗನಾಥ್, ಎಚ್.ಬಿ.ಕಿರಣ್‍ಕುಮಾರ್, ಎಚ್.ಎ.ಭರತ್, ಕಂಠಯ್ಯ ಹಾಗೂ ಶೆಟ್ಟಿಕೆರೆಯಿಂದ ಎಸ್.ಇ.ಪ್ರದೀಪ್‍ರಾಜ್, ಎಸ್.ಭಾರ್ಗವ್, ಚಂದ್ರಶೇಖರ್ ಅವರುಗಳು ಈ ಚಾರಣದಲ್ಲಿ ಭಾಗವಹಿಸಲಿದ್ದಾರೆ.

(Visited 36 times, 1 visits today)