ತುಮಕೂರು:
ಪರೀಕ್ಷೆಗಳನ್ನು ರದ್ದುಪಡಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ಬಿಇಡಿ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ ಯುಜಿಸಿ ಹಾಗೂ ಕೇಂದ್ರ-ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಕೋವಿಡ್ ಸಂದರ್ಭದಲ್ಲಿ ದೇಶವ್ಯಾಪಿ ಎಲ್ಲಾ ವಿವಿಗಳಲ್ಲೂ ಸಹ ತರಗತಿಗಳು ನಡೆದಿಲ್ಲ. ಆದ್ದರಿಂದ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯ ಮಾಡಲಾಗಿತ್ತು.
ಇದನ್ನು ಮನಗಂಡ ಯುಜಿಸಿ ಹಾಗೂ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಮುಂಬಡ್ತಿ ನೀಡುವಂತೆ ಸೂಚಿಸಿತ್ತು. ಆದರೆ ತುಮಕೂರು ವಿವಿಯು ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡದೆ ನಿರ್ಲಕ್ಷ ಮಾಡಿತ್ತು. ಹಾಗಾಗಿ ಇಲ್ಲಿಯೂ ಸಹ ಯುಜಿಸಿ ನಿಯಮಗಳನ್ನು ಪಾಲಿಸಿ ಬಿಇಡಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದು ಮಾಡಿ, ಮುಂದಿನ ಸೆಮಿಸ್ಟರ್‍ಗೆ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.
ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ವಿವಿಯು ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ವಿವಿಯ ಕಲಾ ವಿಜ್ಞಾನ ಕಾಲೇಜು ವಿಭಾಗಗಳ ಸೀಟುಹಂಚಿಕೆ ವಿಚಾರದಲ್ಲಿ ಬಹಳಷ್ಟು ಗೊಂದಲ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ಸರಿಪಡಿಸಲು ಮುಂದಾಗಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ವಿವಿ ಗಮನಹರಿಸಬೇಕು. ವಿದ್ಯಾರ್ಥಿಗಳ ಅಭಿವೃದ್ಧಿಗೆ ವಿವಿ ಹೆಚ್ಚು ಗಮನಹರಿಸಬೇಕು. ಬಿಇಡಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ಗೊಂದಲವನ್ನು ತಕ್ಷಣವೇ ನಿವಾರಿಸಿ ಅವರನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ಮೌಲ್ಯಮಾಪನ ಕುಲಸಚಿವ ಕೊಟ್ರೇಶ್ ಬಿಇಡಿ ವಿದ್ಯಾರ್ಥಿಗಳ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಎಲ್ಲಾ ವಿದ್ಯಾರ್ಥಿ ಗಳನ್ನು ಮುಂದಿನ ಸೆಮಿಸ್ಟರ್‍ಗೆ ಬಡ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಲಾಕ್‍ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆದಿಲ್ಲವಾದ್ದರಿಂದ ಸರ್ಕಾರದ ನಿಯಮವನ್ನು ಪಾಲಿಸಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯ ನೇತೃತ್ವವನ್ನು ನಗರಾಧ್ಯಕ್ಷ ನವೀನ್, ತಾಲೂಕು ಅಧ್ಯಕ್ಷೆ ಆಶಾ,, ಕಾರ್ಯದರ್ಶಿ ತಿಲಕ್, ಕಾವ್ಯ ಯೋಗೀಶ್, ಯುವ ಮುಂದಾಳು ಜಿ.ದರ್ಶನ್, ಸೌಂದರ್ಯ, ಕಿರಣ್, ಪುಟ್ಟರಾಜ್, ಹನುಮಂತರಾಜು, ಲೋಕೇಶ್ ಮೊದಲಾದವರು ಭಾಗವಹಿಸಿದ್ದರು.