ತುಮಕೂರು:

      ಕ್ರಿಶ್ತಪೂರ್ವ 571ರಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರು ಪ್ರಪಂಚದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾರಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

      ನಗರದ ಬಾರ್‍ಲೈನ್ ರಸ್ತೆಯ ಮೆಕ್ಕಾ ಮಸೀದಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಅಲ್ಲಾಹನ ಪ್ರತಿನಿಧಿಯಾಗಿ ಧರೆಗೆ ಬಂದು, ಮನುಕುಲದ ಸಮಸ್ಯೆಗಳಿಗೆ ತತ್ವ ಸಂದೇಶಗಳ ಮೂಲಕ ಪರಿಹಾರವನ್ನು ಸೂಚಿಸಿದ್ದಾರೆ.ಪ್ರವಾದಿಗಳು ಬೋಧಿಸಿದ ಪರಿಹಾರ ಸೂತ್ರಗಳು ಮುಸ್ಲಿಂ ಸಮುದಾಯಕ್ಕೆ ಸಿಮೀತವಲ್ಲ. ಇಡೀ ಮನುಕುಲಕ್ಕೆ ಸೇರಿದ್ದು.ಅಂದು ಅವರು ಬೋಧಿಸಿದ ಪರಿಹಾರ ಸೂತ್ರಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಸಹೋದರ ರಂತೆ ಬಾಳಬೇಕಾಗಿದೆ ಎಂದರು.

       ಇಂದು ಶಾಂತಿಯ ಸಂದೇಶಗಳ ದೃಷ್ಠಿಕೋನ ಬದಲಾಗಿದೆ.ದೇಶ,ದೇಶಗಳ ನಡುವೆ ದ್ವೇಷ,ಅಸೂಯೆಗಳು ತುಂಬಿ ತುಳುಕುತಿದ್ದು, ಕಂದಕಗಳು ಸೃಷ್ಟಿಯಾಗಿವೆ.ಪ್ರವಾದಿಗಳ ಶಾಂತಿ ಮತ್ತು ನೆಮ್ಮದಿಯ ಸಂದೇಶಗಳನ್ನು ಅರ್ಥ ಮಾಡಿಕೊಂಡು ಬದುಕಿದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

      ತುಮಕೂರು ಜಿಲ್ಲೆ ಶಾಂತಿ,ನೆಮ್ಮದಿಗೆ ಹೆಸರುವಾಸಿಯಾದ ಜಿಲ್ಲೆ. ಇಲ್ಲಿನ ಮುಸ್ಲಿಂರು,ಹಿಂದೂಗಳು ಹಾಗೂ ಇತರೆ ಧರ್ಮದವರು ಅಣ್ಣ, ತಮ್ಮಂದಿರಂತೆ ಬಾಳುತ್ತಿದ್ದು,ಕೋಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ.ಜನಪ್ರತಿನಿಧಿಗಳು ಸಹ ಪರಸ್ವರ ಸಹೋದರ ರಂತೆ ಬದುಕುತಿದ್ದಾರೆ.ಎಲ್ಲಾ ಧರ್ಮದವರು ಒಗ್ಗೂಡಿ, ಭಾರತದ ಒಳಿತಿಗಾಗಿ ದುಡಿಯೋಣ ಎಂಬ ಸಂದೇಶವನ್ನು ತುಮಕೂರು ಜಿಲ್ಲೆ ನಾಡಿಗೆ ನೀಡಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

      ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನಾನು ಐದನೇ ಬಾರಿ ಮುಸ್ಲಿಂರ ಪವಿತ್ರ ಹಬ್ಬದಲ್ಲಿ ಭಾಗವಹಿಸುತ್ತಿದ್ದೇನೆ. ಇಡೀ ವಿಶ್ವವೇ ಇಂದು ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನವಾಗಿ ಈದ್ ಮಿಲಾದ್ ಹೆಸರಿನಲ್ಲಿ ಆಚರಿಸುತ್ತಿದ್ದು, ಅವರ ಶಾಂತಿ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳೋಣ ಎಂದರು.

       ಮಾಜಿ ಶಾಸಕ ಹಾಗೂ ಮಕ್ಕಾ ಮಸೀದಿ ಮುಖಂಡರಾದ ಎಸ್.ಷಪಿ ಅಹಮದ್ ಮಾತನಾಡಿ, ಮೈಸೂರು ಮಹಾರಾಜರ ಕಾಲದಲ್ಲಿ ಬಾರ್‍ಲೈನ್ ರಸ್ತೆಯ ಮೆಕ್ಕಾ ಮಸೀದಿಯಲ್ಲಿ ನಿರ್ಮಿಸಲಾಗಿದೆ. ಇದೊಂದು ಸರಕಾರಿ ಮಸೀದಿಯಾಗಿದ್ದು, ಸರಕಾರದ ಪರವಾಗಿ ನಾವುಗಳು ಪ್ರಾರ್ಥನೆ ಸಲ್ಲಿಸುತ್ತೇವೆ.ಪ್ರತಿವರ್ಷ ಈದ್ ಮಿಲಾದ್ ಹಬ್ಬವನ್ನು ಈ ಮಸೀದಿಯಿಂದಲೇ ಪ್ರಾರಂಭಿಸ ಲಾಗುತ್ತಿದೆ. ಎಲ್ಲರೂ ಅಣ್ಣ, ತಮ್ಮಂದಿರಂತೆ ಬದುಕುತಿದ್ದೇವೆ ಎಂದರು.

       ಇದೇ ವೇಳೆ ಮಸೀದಿ, ಚರ್ಚ್,ಮಂದಿರ, ದೇವಾಲಯಗಳಲ್ಲಿ ದ್ವನಿ ವರ್ಧಕ ಬಳಕೆಗೆ ವಿನಾಯಿತಿ ನೀಡಬೇಕೆಂಬ ಮನವಿಯನ್ನು ಮಸೀದಿ ಪರವಾಗಿ ಗೃಹ ಸಚಿವರಿಗೆ ನಿವೃತ್ತ ಡಿಡಿಪಿಐ ಖಲಂದರ್ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್,ಸಿಇಓ ಅನೀಶ್ ಜಾಯ್,ಎಸ್.ಪಿ. ಡಾ.ದಿವ್ಯಾ ಗೋಪಿನಾಥ್, ಮುಖಂಡರಾದ ಮುಸ್ತಾಕ್ ಅಹಮದ್,ಟಿ.ಆರ್.ವೇಣುಗೋಪಾಲ್,ಮೆಹಬೂಬ್ ಪಾಷ, ಸೈಯದ್ ನಯಾಜ್,ಅಪ್ತಾಬ್ ಅಹಮದ್, ವೈ.ಎನ್.ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

(Visited 57 times, 1 visits today)