ತುಮಕೂರು:
ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರವೂ ಸ್ಪಂದಿಸಬೇಕಿದೆ. ಆದರೆ ರೈತರ ಸಮಸ್ಯೆ ಹೊತ್ತು ಕೇಂದ್ರಕ್ಕೆ ಹೋದಾಗ ಯಾವುದೇ ರೀತಿಯಲ್ಲೂ ಸ್ಪಂದಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಆರೋಪಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ಕೇಂದ್ರ ಸರ್ಕಾರ ನಿಗದಿಪಡಿಸುವುದರಿಂದ ಅವರು ಸಹ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಿದೆ. ಆದರೆ ತಮಗೂಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕೇಂದ್ರ ವರ್ತಿಸುತ್ತಿದೆ. ಹೀಗಿರುವಾಗ ರಾಜ್ಯ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಾಡುತ್ತಾರೆ. ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದರೆ ಇವಱ್ಯಾರಿಗೂ ರೈತರ ಪರವಾದ ಕಾಳಜಿ ಇಲ್ಲದಿರುವುದು ಕಂಡು ಬರುತ್ತದೆ ಎಂದರು
ಕೇಂದ್ರ ಸರ್ಕಾರ ನಿಗದಿಪಡಿಸುವ ಕಬ್ಬಿನ ಎಫ್.ಆರ್.ಪಿ. ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭದಲ್ಲಿ ಎಫ್.ಆರ್.ಪಿ. ಬೆಲೆಗಿಂತ ಹೆಚ್ಚು ಬೆಲೆ ಸಿಗುತ್ತದೆ. ಇನ್ನು ಕೆಲವೊಮ್ಮೆ ಕಡಿಮೆಯೂ ಸಿಗುತ್ತದೆ. ಹಾಗಾಗಿ ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂಗಳಂತೆ ನಡೆದುಕೊಳ್ಳುತ್ತಿಲ್ಲ. ಇದನ್ನು ಮನಗಂಡು ರೈತರಿಗೆ ಸಹಾಯ ಮಾಡುವುದಕ್ಕಾಗಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ ಎಂದರು.
ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 450 ರೂ. ಬೆಂಬಲ ಬೆಲೆ ನೀಡಿದ್ದಾರೆ. 2017-18ರ ಒಪ್ಪಂದದ ಹಣ ಕೊಟ್ಟಿಲ್ಲ ಎಂದು ರೈತರ ಪ್ರತಿಭಟನೆಗಿಳಿದಿದ್ದಾರೆ. ಆದರೆ ಸರ್ಕಾರ ಈಗಾಗಲೇ ರೈತರೊಂದಿಗೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ ಎಂದರು.
ಬೆಳಗಾವಿ ಅಧಿವೇನದ ಸಂದರ್ಭದಲ್ಲಿ ಅಂತಿಮವಾಗಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಉಪಸ್ಥಿತರಿದ್ದರು.