ಬೆಂಗಳೂರು :
ಅನಾರೋಗ್ಯದ ಕಾರಣ ನೀಡಿ ವರ್ಗಾವಣೆಗೆ ಕೋರುವ ಪೊಲೀಸರನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕ ಸುತ್ತೋಲೆ ಹೊರಡಿಸಿದ್ದಾರೆ.
ಅನಾರೋಗ್ಯದ ನಿಮಿತ್ತ ಬೇರೆ ಠಾಣೆಗಳಿಗೆ ವರ್ಗಾವಣೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆ ವೈದ್ಯಕೀಯ ದಾಖಲೆಗಳನ್ನು ಸಹ ಲಗತ್ತಿಸಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸಿದಾಗ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಇನ್ನಿತರೆ ಗುರುತರವಲ್ಲದ ಆರೋಗ್ಯ ಸಮಸ್ಯೆಯನ್ನು ನೀಡಿ ಪೊಲೀಸರು ವರ್ಗಾವಣೆ ಬಯಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ನಿಯುಕ್ತಗೊಳಿಸಿರುವ ಠಾಣೆಗಳಲ್ಲಿ ಕನಿಷ್ಠ ವರ್ಗಾವಣೆ ಅವಧಿಯನ್ನು ಪೂರ್ಣಗೊಳಿಸದ ಎಎಸ್‌ಐ, ಎಚ್‌ಸಿ ಹಾಗೂ ಪಿಸಿ ಅವರು ವರ್ಗಾವಣೆಗೆ ಇನ್ನು ಮುಂದೆ ಕಚೇರಿಗೆ (ಎಸ್ಪಿ ಕಚೇರಿ) ನೇರವಾಗಿ ಮನವಿಗಳನ್ನು ಸಲ್ಲಿಸಿದರೆ ಅಂತಹವರನ್ನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಅನರ್ಹರೆಂದು ಪರಿಗಣಿಸಲಾಗುತ್ತದೆ. ಬಳಿಕ ಕೆಸಿಎಸ್‌ಆರ್ ನಿಯಮ 285ರ ನಿಯಮಗಳ ಅಡಿಯಲ್ಲಿ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಲಾಗುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆಯು ಒಂದು ಶಿಸ್ತಿನ ಇಲಾಖೆಯಾಗಿದೆ. ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವ ಮುನ್ನ ಮೇಲಾಧಿಕಾರಿಗಳ ಅನುಮತಿ ಪಡೆಯದೆ ನೇರವಾಗಿ ಮನವಿ ಸಲ್ಲಿಸಿ ಕೆಲವರು ಆಶಿಸ್ತು ಪ್ರದರ್ಶಿಸುತ್ತಿರುತ್ತಾರೆ. ವರ್ಗಾಯಿಸಿರುವ ಠಾಣೆಗಳಲ್ಲಿ ಕನಿಷ್ಠ ಕಾಲಾವಧಿಯಲ್ಲಿ ಸೇವೆ ಸಲ್ಲಿಸದೆ ಕೆಲವರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.