ತುಮಕೂರು:
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳ ಸಹಯೋಗದಲ್ಲಿ ಡಿಸೆಂಬರ್ 19ರಂದು “ಬೃಹತ್ ಲೋಕ್ ಅದಾಲತ್” (ಜನತಾ ನ್ಯಾಯಾಲಯ)ಅನ್ನು ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ನ್ಯಾಯಾಲಯ ಸಭಾಂಗಣದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬೃಹತ್ ಲೋಕ್ ಅದಾಲತ್ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ, ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ/ಕೌಟುಂಬಿಕ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಅತೀ ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿದಿನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‍ಗಳನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಅದಾಲತ್‍ನ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಸರ್ವರಿಗೂ ನ್ಯಾಯ ಎಂಬುದು ಭಾರತದ ಕಾನೂನು ಸೇವೆಗಳ ಧ್ಯೇಯವಾಗಿದೆ. ಯಾವೊಬ್ಬ ಪ್ರಜೆಯು ತನ್ನ ಆರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣಗಳಿಂದಾಗಿ ನ್ಯಾಯ ಪಡೆಯುವುದರಿಂದ ವಂಚಿತನಾಗಬಾರದೆಂದು ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಸಮಾಜದ ದುರ್ಬಲ ವರ್ಗಗಳಿಗೆ ಒದಗಿಸುವ ಸಲುವಾಗಿ ಜನತಾ ನ್ಯಾಯಾಲಯಗಳನ್ನು ವ್ಯವಸ್ಥೆಗೊಳಿಸಲು ಹಾಗೂ ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅದಾಲತ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜನಸಾಮಾನ್ಯರಿಗೆ ಅತೀ ತ್ವರಿತ ಹಾಗೂ ವೆಚ್ಚವಿಲ್ಲದೆ ರಾಜೀ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸುವುದು ಈ ಜನತಾ ನ್ಯಾಯಾಲಯದ ಉದ್ದೇಶವಾಗಿದೆ. ಡಿಸೆಂಬರ್ 19ರಂದು ಹಮ್ಮಿಕೊಂಡಿರುವ ಸದರಿ ಬೃಹತ್ ಲೋಕ್ ಅದಾಲತ್‍ನಲ್ಲಿ ಎಲ್ಲಾ ರೀತಿಯ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಈ ಜನತಾ ನ್ಯಾಯಾಲಯವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳು ಮತ್ತು ಖಾಯಂ ಜನತಾ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಅದಾಲತ್‍ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ಕು ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ (Excluding non-compoundable)ಗಳು, ಇತರೆ ಪ್ರಕರಣ(ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಹಾಗೂ ಇತರೆ ಸಿವಿಲ್ ಪ್ರಕರಣ)ಗಳನ್ನು ಇತ್ಯರ್ಥಪಡಿಸಲಾಗುವುದು.