ಮಧುಗಿರಿ :

      ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಪನಿರ್ದೇಶಕರ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಡಿಸಿಎಂ, ತುಮಕೂರು ಜಿಲ್ಲೆಯ ಇಬ್ಬರು ಸಚಿವರು, ಇಬ್ಬರು ಸಂಸದರು, ಸ್ಥಳೀಯ ಶಾಸಕರು, ಜಿಲ್ಲೆಯ ಶಾಸಕರುಗಳು, ಎಂ.ಎಲ್.ಸಿ ಗಳು ಜಿ.ಪಂ.ಸದಸ್ಯರುಗಳು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒ, ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಜನ ಪ್ರತಿನಿಧಿಗಳ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಪ್ರೋಟೋ ಕಾಲ್ ಅಡಿಯಲ್ಲಿ ಮುದ್ರಿಸಿದ್ದರು ಯಾರೊಬ್ಬರು ಕಾರ್ಯಕ್ರಮಕ್ಕೆ ಹಾಜರಾಗದೆ ಅಚ್ಚರಿ ಮೂಡಿಸಿದರು. ಈ ಕಾರ್ಯಕ್ರಮವು ಹೋಬಳಿ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಂತೆ ಬಾಸವಾಗುತ್ತಿತ್ತು.

      ರಾಜ್ಯ ರಾಜಕಾರಣದ ಚದುರಂಗದಾಟದಲ್ಲಿ ಬಿಜಿಯಾಗಿರುವ ರಾಜ್ಯ ಮಟ್ಟದ ರಾಜಕಾರಣಿಗಳಿಗೆ ರಾಜ್ಯ ಮಟ್ಟದ ಚೆಸ್ ಕ್ರೀಡಾಕೂಟಕ್ಕೆ ಭಾಗವಹಿಸದೆ ಅಪಮಾನ ಮಾಡಿದ್ದಾರೆಂದು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಮತ್ತು ನಿವೃತ್ತ ದೈಹಿಕ ಶಿಕ್ಷಕರೊಬ್ಬರ ಆರೋಪವಾಗಿದೆ.

      ಚೆಸ್ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಕೆ. ರವಿಶಂಕರ ರೆಡ್ಡಿ,   ಮಧುಗಿರಿ ಚಿಕ್ಕ ಊರಾದರೂ ಇಲ್ಲಿನ ಜನರ ಹೃದಯ ಶ್ರೀಮಂತಿಕೆ ದೊಡ್ಡದು ಆಗಿರುವುದರಿಂದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಸುಸೂತ್ರವಾಗಿ ನಡೆಸಲು ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಪಂದ್ಯಾವಳಿಯನ್ನು ನಡೆಸಲು ಹಣಕಾಸಿನ ಮುಗ್ಗಟ್ಟು ಉಂಟಾದಾಗ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಚೆಸ್ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಊಟದ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಟ್ಟಿವೆ ಎಂದು ಶ್ಲಾಘಿಸಿದರು.

      ಮಧುಗಿರಿ ಏಕಾಶಿಲಾ ಬೆಟ್ಟವು ಪ್ರಪಂಚದಲ್ಲಿ ಎರಡನೇಯದು ಏಷ್ಯಖಂಡದಲ್ಲಿ ಪ್ರಥಮವಾಗಿದ್ದು, ಈ ಹಿಂದೆ ಲೋಕಾಸಭಾ ಕ್ಷೇತ್ರವಾಗಿ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿಯನ್ನು ಹೊಂದಿರುವುದನ್ನು ಮತ್ತು ರಾಜರ ಆಳ್ವಿಕೆ ಸಂದರ್ಭದಲ್ಲಿಯೇ ಮಧುಗಿರಿ ಜಿಲ್ಲಾ ಕೇಂದ್ರವಾಗಿದ್ದು ಪ್ರಸ್ತುತ ಶೈಕ್ಷಣಿಕ ಜಿಲ್ಲೆ ಕೇಂದ್ರವಾಗಿದೆ ಎಂದು ಇತಿಹಾಸವನ್ನು ತೆರೆದಿಟ್ಟರು.

      ಕ್ರೀಡೆಯಲ್ಲಿ ಯಾವುದೇ ಗೇಮ್‍ಗಳು ದೈಹಿಕ ಶ್ರಮವನ್ನು ಬಯಸಿದರೆ ಚದುರಂಗದಾಟದಲ್ಲಿ ಬುದ್ದಿವಂತಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಬೆಳೆಸಲು ಸಹಾಯಕವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮಹನೀಯರ ಆದರ್ಶಗಳನ್ನು ತಿಳಿಸಿಕೊಟ್ಟು ಮಕ್ಕಳಲ್ಲಿ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಯಾವುದೇ ಕ್ರೀಡೆಗಳು ಸೋತ ನಂತರ ಕ್ರೀಡಾಪಟುಗಳು ಪ್ಯಾಕಪ್ ಆಗುತ್ತಾರೆ ಆದರೆ ಚೆಸ್ ಕ್ರೀಡೆಯಲ್ಲಿ ಮಾತ್ರ ಮೂರು ದಿನಗಳು ಕ್ರೀಡಾಪಟುಗಳು ಇರುವುದರಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಜವಾಬ್ದಾರಿ ಕೆಲಸವಾಗಿದೆ ಎಂದರು.

     ಜಿ.ಪಂ ಸದಸ್ಯ ಚೌಡಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳಲ್ಲೂ ತಮ್ಮದೇ ಆದ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಪೋಷಕರದ್ದು, ಚೆಸ್ ಬುದ್ದಿವಂತರ ಆಟ. ಹಿಂದೆ ಮಹಾರಾಜರ ಕಾಲದಲ್ಲೂ ಚದುರಂಗದಾಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಶಿಕ್ಷಣ ಬದುಕಿಗೆ ಶಕ್ತಿ ನೀಡುವ ಸಾಧನ. ಸರ್ಕಾರ ಇಂದು ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.

      ಎಪಿಎಂಸಿ ಅಧ್ಯಕ್ಷ ಎಂ.ಬಿ. ಮರಿಯಣ್ಣ ಕ್ರೀಡಾ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಎಲ್ಲಾ ರಂಗಗಳಲ್ಲೂ ಮಂಚೂಣಿಯಲ್ಲಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

620 ಕ್ರೀಡಾಪಟುಗಳು ಬಾಗಿ :

      ಚೆಸ್ ಪಂದ್ಯಾವಳಿಯಲ್ಲಿ ಪ್ರತೀ ಜಿಲ್ಲೆಯಿಂದ 20 ಸ್ಪರ್ಧಾಳುಗಳಂತೆ, 30 ಜಿಲ್ಲೆಗಳಿಂದ ಪ್ರಾಥಮಿಕ ಶಾಲೆ ವಿಭಾಗದಲ್ಲಿ 155 ಹೆಣ್ಣು ಮಕ್ಕಳು, 155 ಗಂಡು ಮಕ್ಕಳು ಮತ್ತು ಪ್ರೌಢಶಾಲ ವಿಭಾಗದಲ್ಲಿ 155 ಗಂಡು ಮತ್ತು 155 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 620 ಮಕ್ಕಳು 62 ಜನ ತಂಡದ ವ್ಯವಸ್ಥಾಪಕರು ಭಾಗವಹಿಸಿದ್ದರು.

      ಎಲ್ಲಾ ಮಕ್ಕಳಿಗೂ ಪಟ್ಟಣದ ವಿವಿಧ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಸತಿ ಸೌಕರ್ಯ ಮತ್ತು ಸರ್ಕಾರಿ ನೌಕರರ ಭವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

      ಮಧುಗಿರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಮಂಡಿವರ್ತಕ ಆರ್.ಸಿ. ವಿಜಯಕುಮಾರ್ ಜೈನ್, ಎಪಿಎಂಸಿ ಯಾರ್ಡ್‍ನಲ್ಲಿ ಸಿಜನ್ ಆಗಿದ್ದಿದ್ದರೆ ಈ ಕ್ರೀಡಾಕೂಟವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಜಿನುಗುವ ಮಳೆಯಿಂದಾಗಿ ಎಪಿಎಂಸಿ ಯ ವಾಣಿಜ್ಯ ಮಳಿಗೆಗಳೇ ಪೋಷಕರುಗಳಿಗೆ ಆಶ್ರಯವಾಗಿದ್ದನ್ನು ಕಂಡು ಮುಂದಿನ ಇಂತಹ ರಾಜ್ಯಮಟ್ಟದ ಕ್ರೀಡಾಕೂಟವನ್ನು ಮಧುಗಿರಿ ವಿದ್ಯಾಸಂಸ್ಥೆಯ ಕ್ಯಾಂಪಸ್‍ನಲ್ಲಿ ಆಯೋಜಿಸಿದರೆ ಸಹಕಾರ ನೀಡುವುದಾಗಿ ಶಿಕ್ಷಣ ಇಲಾಖೆಯವರಿಗೆ ತಿಳಿಸಿದರು.

 

(Visited 20 times, 1 visits today)