ತುಮಕೂರು :

      ಪೊಕ್ಸೊ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ಸಚಿವರಾದ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಪೊಕ್ಸೊ ಪ್ರಕರಣಗಳ ಪರಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪೊಕ್ಸೋ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಕ್ಕೆ ವಿಳಂಬವಾಗಬಾರದು. ಆರೋಪಿತರಿಗೆ ಶಿಕ್ಷೆಯಾದರೆ ಬೇರೆಯವರಿಗೆ ಭಯ ಉಂಟಾಗುತ್ತದೆ. ಪ್ರಕರಣದಲ್ಲಿ ತಪ್ಪಿತಸ್ಥರು ಖುಲಾಸೆಯಾಗದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

      ತುಮಕೂರು ಜಿಲ್ಲೆಯಲ್ಲಿ ಪೊಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದರೆ 15 ವರ್ಷದ ಮೇಲ್ಪಟ್ಟ ಮಕ್ಕಳ ಪ್ರಕರಣಗಳು ಹೆಚ್ಚಾಗಿವೆ. ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಓದುತ್ತಿರುವವರು ಪ್ರೀತಿಸಿ ಓಡಿಹೋದವರು, ಪ್ರೀತಿಸಿ ಮಧುವೆಯಾದವರೂ ಇದ್ದಾರೆ. ಇಂತಹ ಪ್ರಕರಣಗಳನ್ನು ಕಿಡ್ನಾಪ್ ಪ್ರಕರಣಗಳೆಂದು ಪರಿಗಣಿಸಿ ಪೊಕ್ಸೊ ಕಾಯ್ದೆ ಹಾಕಲಾಗಿದೆ ಎಂದರು.   

      2020-21ನೇ ಸಾಲಿನಲ್ಲಿ 6 ಮಂದಿಗೆ 2019-20ರಲ್ಲಿ 11 ಮಂದಿಗೆ ಶಿಕ್ಷೆಯಾಗಿದೆ. ಪೊಕ್ಸೋ ಪ್ರಕರಣಗಳಲ್ಲಿ ಸಾಕ್ಷ್ಯಾಧಾರರು ತಮ್ಮ ಸಾಕ್ಷ್ಯ ಹೇಳಿಕೆಗಳನ್ನು ಸರಿಯಾಗಿ ನೀಡಿದರೆ ಆರೋಪಿತರಿಗೆ ಶಿಕ್ಷೆಯಾಗಲಿದೆ. ಪ್ರಕರಣಗಳಲ್ಲಿ ಅಪರಾಧಿಗೆ ಬೇಗ ಶಿಕ್ಷೆಯಾಗಬೇಕು, ಈ ಸಂದೇಶ ಸಮಾಜಕ್ಕೆ ಹೋಗಬೇಕು. ಈ ಪ್ರಕರಣಗಳಲ್ಲಿ ನೋಡಿದರೆ ಪರಿಚಯಸ್ಥರು, ನೆಂಟರಿಷ್ಟರು, ಆತ್ಮೀಯತೆ ಇರುವವರಿಂದ ಇಂತಹ ಘಟನೆಗಳು ಆಗಿವೆ ಎಂದು ಅವರು ತಿಳಿಸಿದರು.

      ಗ್ರಾಮಾಂತರ ಪ್ರದೇಶ ಹಾಗೂ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಘಟಿಸುತ್ತಿವೆ. ಇಂತಹ ಪ್ರಕರಣಗಳು ನಿಯಂತ್ರಿಸಲು ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು ಮಕ್ಕಳನ್ನು ಪ್ರೀತಿಯಿಂದ ಪೋಷಕರು ನೋಡಿಕೊಳ್ಳಬೇಕು ಎಂದರು.

        ಬೇಟಿ ಬಜಾವೊ ಬೇಟಿ ಪಡಾವೋ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಕಳೆದ ಬಾರಿ ಪೊಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿನಲ್ಲಿ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದರು.

      ಪೊಕ್ಸೋ ಪ್ರಕರಣಗಳ ಕುರಿತಂತೆ ಕಾಲಕಾಲಕ್ಕೆ ಸಂಬಂಧಪಟ್ಟ ಅಧಿಕಾರಿ/ಇಲಾಖೆಗಳ ಸಭೆ ಕರೆದು ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಅಲ್ಲದೆ ಪೊಕ್ಸೋಹಾಗೂ ಬಾಲ್ಯ ವಿವಾಹ ತಡೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

      2019ರಲ್ಲಿ ಕಲ್ಪತರು ಪಡೆಯನ್ನು ರಚಿಸಲಾಗಿದೆ. ಬ್ಯಾಡ್‍ಟಚ್, ಗುಡ್‍ಟಚ್ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಲಾಗಿದೆ. ಪ್ರಕರಣಗಳ ಬಗ್ಗೆ ಪ್ರತಿ ತಿಂಗಳು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಅವರು ಸಭೆಗೆ ತಿಳಿಸಿದರು.

      ಜಿಲ್ಲೆಯಲ್ಲಿ ನಡೆಯುತ್ತಿರುವ ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು. ಪೊಕ್ಸೊ ಹಾಗೂ ಬಾಲ್ಯವಿವಾಹ ತಡೆಗೆ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವರು ಜಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಅಶೋಕ್ ಯರಗಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯರಾದ ನವ್ಯಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್, ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ, ಡಿಹೆಚ್‍ಓ ಡಾ: ನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

(Visited 14 times, 1 visits today)