ಹುಳಿಯಾರು:
ದಾಸ ಶ್ರೇಷ್ಠ ಕನಕದಾಸರ ತತ್ವಾದರ್ಶದಂತೆ ಕುಲಕುಲವೆಂದು ಹೊಡೆದಾಡದೆ ಎಲ್ಲಾ ಜಾತಿ, ಧರ್ಮದವರೊಂದಿಗೆ ಸಮಾರಸ್ಯ ಮತ್ತು ಸೌಹಾರ್ದತೆಯಿಂದ ಬಾಳುವಂತೆ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಕರೆ ನೀಡಿದರು.
ಹುಳಿಯಾರಿನ ಕನಕದಾಸ ಸರ್ಕಲ್‍ನಲ್ಲಿ ಹೋಬಳಿ ಕುರುಬರ ಸಂಘದಿಂದ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಹುಳಿಯಾರಿನ ಕನಕ ಸರ್ಕಲ್ ವಿವಾಧಕ್ಕೆ ತಿರುಗಿ ರಾಜ್ಯಾಧ್ಯಂತ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಠಿಯಾಯಿತು. ಈ ಕಹಿ ಘಟನೆಯನ್ನು ಕುರುಬರು ಮರೆತು ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬಾಳ್ವೆ ನಡೆಸಲು ಮುಂದಾಗಬೇಕು ಎಂದರಲ್ಲದೆ ಮುಂದಿನ ವರ್ಷ ಕನಕ ಸರ್ಕಲ್‍ನಲ್ಲಿ ಕನಕರ ಕಂಚಿನ ಪುತ್ಥಳಿ ಸ್ಥಾಪಿಸಿ ಅದ್ದೂರಿಯಾಗಿ ಕನಕ ಜಯಂತಿ ಆಚರಿಸಲು ಎಲ್ಲರೂ ಕೈ ಹಾಲುಮತ ಸಮುದಾಯದವರು ಹಾಲಿನಂತ ಮನಸ್ಸುಳ್ಳವರು. ನಂಬಿಕೆಗೆ ಅರ್ಹವಾದವರು ಎನ್ನಲಾಗುತ್ತದೆ. ಹಾಗಾಗಿಯೇ ಉತ್ತರ ಕರ್ನಾಟಕದ ಕಡೆ ಹಾಲುಮತದವರ ಕೈಯಲ್ಲಿ ಬೋಣಿಗೆ ಮಾಡಿಸಿಕೊಳ್ಳಲು ಇತರ ಜಾತಿ, ಧರ್ಮದ ವ್ಯಾಪಾರಸ್ಥರು ಇಚ್ಚಿಸುತ್ತಾರೆ. ಇಂತಹ ಜಾತಿಯಲ್ಲಿ ಹುಟ್ಟಿರುವ ನಾವುಗಳು ಪುಣ್ಯವಂತರು ಎಂದರಲ್ಲದೆ ಇತರರು ಕುರುಬರ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರು ಮಾತನಾಡಿ ಕನಕದಾಸರು ಪ್ರಚಾರಕ್ಕಾಗಿ ಎಂದೂ ಕೀರ್ತನೆಗಳನ್ನು ಹಾಡದೆ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಉಡುಪಿಯಲ್ಲಿ ಶ್ರೀಕೃಷ್ಣನನ್ನೇ ತನ್ನತ್ತ ತಿರುಗಿಸುವ ಮೂಲಕ ಜಗತ್ತಿಗೆ ಶ್ರೇಷ್ಠ ಭಕ್ತರೆಂದು ಹೆಸರಾದರು. ಸಕಲ ಐಶ್ವರ್ಯ, ಅಧಿಕಾರ ತೊರೆದು ವಿರಾಗಿಯಾಗಿ, ವಿಶ್ವ ಕಂಡ ಶ್ರೇಷ್ಠ ದಾಸರೆನಿಸಿದರು. ಕನಕರನ್ನು ಜಾತಿ ಸಂಕೋಲೆಯಲ್ಲಿ ನೋಡದೆ ಎಲ್ಲರೂ ಕನಕದಾಸರ ತತ್ವ ಪಾಲಿಸುವಂತೆ ತಿಳಿಸಿದರು.
ಹುಳಿಯಾರು ಹೋಬಳಿ ಕುರುಬರ ಸಂಘದ ಅಧ್ಯಕ್ಷ ಹೊಸಹಳ್ಳಿ ಅಶೋಕ್, ಪಪಂ ಮಾಜಿ ಸದಸ್ಯರುಗಳಾದ ಧನುಷ್ ರಂಗನಾಥ್, ಪಟಾಕಿ ಶಿವಣ್ಣ, ಎಸ್‍ಆರ್‍ಎಸ್ ದಯಾನಂದ್, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ನಂದಿಹಳ್ಳಿದೇವರಾಜು, ಹೊಸಹಳ್ಳಿಕೃಷ್ಣಮೂರ್ತಿ, ಕನಕದಾಸ ವಿದ್ಯಾ ಸಂಸ್ಥೆಯ ಶಿವಪ್ರಕಾಶ್, ಉದಯಶಂಕರ ಒಡೆಯರ್ ಸೇರಿದಂತೆ ಹೋಬಳಿಯ ಹರಿವಾಣದ ಗೌಡರು, ಬಳಗ ಬಂಡಾರಿಗಳು ಉಪಸ್ಥಿತರಿದ್ದರು.