ಹುಳಿಯಾರು :
ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಹಾಗೂ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಒತ್ತಾಯಿಸಿ ಡಿಸೆಂಬರ್ 8 ಸೋಮವಾರ ಬಾರು ಕೋಲು ಚಳುವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಿರ್ಧರಿಸಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ತಿಳಿಸಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸರ್ಕಾರವು ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ಇವುಗಳ ತಿದ್ದುಪಡಿ ಕಾನೂನು ರೂಪಿಸಿದ್ದು, ರಾಷ್ಟ್ರಪತಿ ಅವರ ಸಹಿ ಆಗಿದೆ. ರಾಜ್ಯ ಸರ್ಕಾರ ಕಾನೂನು ಜಾರಿಗೆ ಹೊರಟಿದೆ. ಈ ತಿದ್ದುಪಡಿ ಕಾಯ್ದೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಇವುಗಳನ್ನು ವಿರೋಧಿಸಿ ದೇಶಾಧ್ಯಂತೆ ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದರೂ ಪ್ರಧಾನಿ, ಮುಖ್ಯಮಂತ್ರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ತಿದ್ದುಪಡಿ ಕಾಯ್ದೆಗಳ ವಿರೋಧಿಸುವ ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಹ ರೈತ ಉತ್ಪನ್ನಗಳ ಖರೀದಿ ಕೇಂದ್ರ ತೆರೆಯಬೇಕು. ಮಳೆಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು, ಆವರ್ತ ನಿಧಿ ಸ್ಥಾಪಿಸಿ ರಾಗಿ, ಜೋಳ, ಭತ್ತ ಸೇರಿದಂತೆ ಇನ್ನಿತರೆ ರೈತರ ಉತ್ಪನ್ನಗಳ ಖರೀದಿಸಿ ಅದನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಬೇಕು. ಈ ಎಲ್ಲಾ ವಿಚಾರವಾಗಿ ಸರ್ಕಾರದ ಕಣ್ಣು ತೆರೆಸಲು ಈ ಮುತ್ತಿಗೆಗೆ ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ರೈತರ ಮರಣಶಾಸನವನ್ನು ರದ್ದು ಮಾಡುವ ಸಲುವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಜಿಲ್ಲೆಯ ರೈತರು ಅಪಾರ ಸಂಖ್ಯೆಯಲ್ಲಿ ಬಾರು ಕೋಲಿನೊಂದಿಗೆ ಬೆಂಗಳೂರಿಗೆ ಆಗಮಿಸುವಂತೆ ಮನವಿ ಮಾಡಿದ ಸತೀಶ್ ರೈತ ಪರ ಈ ಹೋರಾಟಕ್ಕೆ ಪಕ್ಷ ಬೇದ ಮರೆತು ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಹೋರಾಡಬೇಕು. ಸಾರ್ವಜನಿಕರು ಸಹ ತಮ್ಮ ಭಾಗದ ಶಾಸಕರ ಮೇಲೆ ಕಾಯ್ದೆ ರದ್ದಿಗೆ ಒತ್ತಡ ತರುವಂತೆ ಕೇಳಿಕೊಂಡಿದ್ದಾರೆ.