ತುಮಕೂರು;
ಕೊಲೆ ಪ್ರಕರಣದ ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಓರ್ವನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.
ತುಮಕೂರು ನಗರದಲ್ಲಿ ಇತ್ತೀಚೆಗೆ ನಡೆದ RX ಮಂಜ ಅಲಿಯಾಸ್ ಉಚ್ಚೆಮಂಜನ ಕೊಲೆ ಕೇಸಿನಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ಅವರು ಮೂರು ತನಿಖಾ ತಂಡವನ್ನು ರಚಿಸಿದ್ದರು.
ಪೊಲೀಸರೊಂದಿಗಿನ ನಂಟು ; ರೌಡಿ ಶೀಟರ್ ಆರ್‍ಎಕ್ಸ್ ಮಂಜನ ಶವಕ್ಕೆ ಗಂಟು!!
ಅದರಂತೆ ತನಿಖಾ ತಂಡಕ್ಕೆ ಆರೋಪಿಗಳ ಪೈಕಿ ಓರ್ವ ವ್ಯಕ್ತಿಯ ಸುಳಿವು ಲಭಿಸಿತ್ತು. ಬೆಳಗಿನ ಜಾವ 5.30 ರ ಸಮಯದಲ್ಲಿ ತುಮಕೂರು ಗ್ರಾಮಾಂತರ ಸರಹದ್ದಿನ ಅಜ್ಜಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿಗಳು ಆತನನ್ನು ಹಿಡಿಯಲು ತೆರಳಿದ್ದರು. ಆಗ ಪೊಲೀಸರನ್ನು ಕಂಡ ಆರೋಪಿಯು ಹಠಾತ್ತಾಗಿ ಎಎಸ್ಐ ಪರಮೇಶ್ವರ ಅವರಿಗೆ ತನ್ನ ಬಳಿಯಿದ್ದ ಡ್ರಾಗರ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪರಮೇಶ್ವರರಿಗೆ ಎಡಗೈ ತೋಳಿಗೆ ಮಾರಣಾಂತಿಕ ಗಾಯವಾಗಿದೆ.
ಅಲ್ಲದೇ ಮತ್ತೊಬ್ಬ ಸಿಬ್ಬಂದಿ ಮೇಲೆಯೂ ದಾಳಿ ಮಾಡಲು ಆರೋಪಿ ವಿಕಾಸ್ ಅಲಿಯಾಸ್ ಆರ್.ಎಕ್ಸ್ ವಿಕ್ಕಿ ಮುಂದಾಗಿದ್ದನು. ಕೂಡಲೇ ಎಚ್ಚೆತ್ತ ಪಿಎಸ್ಐ ನವೀನ್, ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ವಿಕ್ಕಿ ಮಾತು ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿ ಮತ್ತೊಮ್ಮೆ ಎಚ್ಚರಿಸಿದ್ದಾರೆ. ಆಗಲೂ ಮಾತು ಕೇಳದ ವಿಕ್ಕಿ ಪೊಲೀಸರ ಮೇಲೆ ದಾಳಿಗೆ ಯತ್ನಿಸುತ್ತಿದ್ದನು, ಆಗ ಪಿಎಸ್ಐ ನವೀನ್, ಆರೋಪಿ ವಿಕ್ಕಿಯ ಎಡಗಾಲಿಗೆ ಗುಂಡುಹಾರಿಸಿ ಆತನನ್ನು ಬಂಧಿಸಿದ್ದಾರೆ.
ಬಂಧಿತ ವಿಕಾಸ್ ಅಲಿಯಾಸ್ ಆರ್.ಎಕ್ಸ್ ವಿಕ್ಕಿ(24) ಗುಬ್ಬಿ ತಾಲ್ಲೂಕಿನ ಗೌರಿಪುರ ನಿವಾಸಿಯಾಗಿದ್ದು, ಸದ್ಯ ಪೊಲೀಸರ ವಶದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ತಿಳಿಸಿದ್ದಾರೆ.