ತುಮಕೂರು :
ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ನಗರದಲ್ಲಿ ರೈತ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು.
ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ರೈತ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ಅಣಕು ಶವವನ್ನು ದಹಿಸಿದ ನಂತರ ಬಿ.ಎಸ್.ರಸ್ತೆ, ಜೆ.ಸಿ.ರಸ್ತೆ, ಮಂಡಿಪೇಟೆ ರಸ್ತೆ, ಬಾರ್‍ಲೈನ್‍ರಸ್ತೆನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾದ್ಯಕ್ಷ ಆನಂದ್ ಪಟೇಲ್, ಕೇಂದ್ರ ಸರ್ಕಾರದ ದೇಶದ ಸಂವಿಧಾನಗಳಿಗೆ ಬೆಲೆ ಕೊಡದೆ ಸರ್ವಾಧಿಕಾರಿಯಂತೆ ಹಿಟ್ಲರ್ ತತ್ವಗಳನ್ನು ಅಳವಡಿಸಿಕೊಂಡು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೂ ಕೇಂದ್ರ ಮಾನವ ಹಕ್ಕುಗಳ ಆಯೋಗ ಕೈಕಟ್ಟಿ ಕುಳಿತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೈಗೊಂಬೆಯಾಗಿ ಮಾನವ ಹಕ್ಕುಗಳ ಆಯೋಗ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು ತುಮಕೂರು ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಬಂದ್ ಆಚರಿಸಲಾಗುತ್ತಿದೆ. ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಸೈನಿಕರನ್ನು ಬಳಸುತ್ತಿದೆ, ರೈತರ ಮೇಲೆ ಅಶ್ರುವಾಯು, ಜಲಫಿರಂಗಿ ಬಲ ಪ್ರಯೋಗ ಮಾಡಿದೆ, ಹಿಟ್ಲರ್‍ನಂತೆ ಆಡಳಿತ ನಡೆಸುತ್ತಿರುವ ಸರ್ಕಾರದ ಮೇಲೆ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ಕೋಡಿಹಳ್ಳಿ ಸಿದ್ಧರಾಜು, ರುದ್ರೇಶ್‍ಗೌಡ, ಪುಟ್ಟರಾಜು, ಕೀರ್ತಿ, ಎನ್.ಕೆ.ಸತೀಶ್, ರತ್ನಮ್ಮ, ಲಕ್ಷ್ಮೀನರಸಮ್ಮ, ಅರಸಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.