ತುಮಕೂರು :
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಸ್ಥರ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಈವರೆಗೆ ಆನ್‍ಲೈನ್ ಮೂಲಕ ಸ್ವೀಕೃತವಾಗಿರುವ 6995 ಬೀದಿಬದಿ ವ್ಯಾಪಾರಿಗಳ ಅರ್ಜಿಗಳ ಪೈಕಿ 1609 ಬೀದಿ ಬದಿ ವ್ಯಾಪಾರಸ್ಥರಿಗೆ ತಲಾ 10ಸಾವಿರ ರೂ.ಗಳ ಕಿರುಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃಧ್ಧಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸಹಯೋಗದಲ್ಲಿ ನಗರದ ಎಸ್‍ಬಿಐ ಬ್ಯಾಂಕ್ ಆವರಣದಲ್ಲಿಂದು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಸ್ಥರ ಆತ್ಮನಿರ್ಭರ್ ನಿಧಿ ಯೋಜನೆಯಡಿ ಕಿರು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ವಿತರಣೆ ಮಾಡಲು ಹಮ್ಮಿಕೊಂಡಿದ್ದ 2 ದಿನಗಳ ಕಿರುಸಾಲ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-2019ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಸಂಕಷ್ಠಕ್ಕೀಡಾದ ಕಾರಣ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಸ್ಥರ ಆತ್ಮನಿರ್ಬರ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಬೀದಿಬದಿ ವ್ಯಾಪಾರಸ್ಥರ ವ್ಯವಹಾರ ಹಾಗೂ ಜೀವನೋಪಾಯಕ್ಕೆ ನೆರವಾಗಲು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜೂನ್-2020ರ ಮಾಹೆಯಲ್ಲಿ ಜಾರಿಗೊಳಿಸಲಾಗಿದ್ದು, ಸದರಿ ಯೋಜನೆಯಡಿ ಪ್ರತಿ ಬೀದಿಬದಿ ವ್ಯಾಪಾರಿಗೆ ಬ್ಯಾಂಕುಗಳ ಮೂಲಕ 10,000/- ರೂ.ಗಳನ್ನು ಕಿರು ಸಾಲವನ್ನು ನೀಡಲಾಗುವುದು. ಬೀದಿಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ವ್ಯವಹಾರ ಮಾಡಲು ಪ್ರೋತ್ಸಾಹಿಸುವುದು ಸಹ ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರಪ್ರಥಮವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವಿವಿಧ ಶಾಖೆಗಳ ಸಹಯೋಗದೊಂದಿಗೆ ಸಾಲ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಾಲ ಮೇಳ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರಲ್ಲದೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಬೀದಿಬದಿ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.
ಸಾಲಕ್ಕಾಗಿ ನಗರ ವ್ಯಾಪ್ತಿಯ 3057 ಬೀದಿಬದಿ ವ್ಯಾಪಾರಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಈ ಸಾಲ ಮೇಳದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು 450 ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮಂಜೂರು ಮಾಡುವ ಗುರಿ ಹೊಂದಲಾಗಿದೆ.
ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಮಂಜೂರು ಮಾಡಲಾಯಿತು. ತುಮಕೂರು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಮೂದ್, ಮುಖ್ಯ ವ್ಯವಸ್ಥಾಪಕರಾದ ನಾಗೇಶ್ ಹಾಗೂ ಬಾಬು ಸೋಮಪ್ಪ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಸಹಾಯಕ ಉಪ ಪ್ರಬಂಧಕ ನಾರಾಯಣಸ್ವಾಮಿ, ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಛೇರಿ, ಸಹಾಯಕ ನಿರ್ದೇಶಕ ವಿಶ್ವೇಶ್ವರ್.ಬಿ, ನಗರದ ವಿವಿಧ ಶಾಖೆಗಳ ಬ್ಯಾಂಕ್ ವ್ಯವಸ್ಥಾಪಕರು ಅಭಿಯಾನ ವ್ಯವಸ್ಥಾಪಕ ದೊಡ್ಡವಲ್ಲಪ್ಪ, ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ, ಸಮುದಾಯ ಸಂಘಟಕ ನಾಗರಾಜಯ್ಯ, ಪಟ್ಟಣ ವ್ಯಾಪಾರಸ್ಥರ ಸಮಿತಿ ಸದಸ್ಯರು, ಮಹಾನಗರಪಾಲಿಕೆ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಡೇ-ನಲ್ಮ್ ಶಾಖೆಯ ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.