ತುಮಕೂರು :
ಜಿಲ್ಲೆಯಲ್ಲಿ ಗ್ರಾಮಪಂಚಾಯತಿಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಡಿ.11) ಕೊನೆಯ ದಿನವಾಗಿದ್ದು, ಮೊದಲ ಹಂತದ ಚುನಾವಣೆ ನಡೆಯುವ ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕಿನ ಗ್ರಾಮಪಂಚಾಯತಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಪಾವಗಡ ತಾಲ್ಲೂಕಿನ ರಾಜವಂತಿ, ಸಿ.ಕೆ.ಪುರ, ಮಂಗಳವಾಡ, ಕೆ.ಟಿ.ಹಳ್ಳಿ, ನಾನಿಗಾನಹಳ್ಳಿ, ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಗ್ರಾಮಪಂಚಾಯಿತಿಗಳಲ್ಲಿ ಚುನಾವಣಾ ಅಧಿಕಾರಿಗಳು ಕೈಗೊಂಡಿರುವ ಚುನಾವಣಾ ಪ್ರಕ್ರಿಯೆ ಹಾಗೂ ಸಿದ್ಧತೆಗಳ ಬಗ್ಗೆ ಪರಿಶೀಲಿಸಿ ಕೆಲವೊಂದು ನಿರ್ದೇಶನಗಳನ್ನು ನೀಡಿದರು.
ಚುನಾವಣೆ ನೀತಿ ಸಂಹಿತೆ ಅನುಷ್ಟಾನ, ಚುನಾವಣಾ ಸಿದ್ಧತೆ, ಮತ್ತಿತರ ವಿಷಯಗಳ ಬಗ್ಗೆ ಚುನಾವಣಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ತದನಂತರ ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕಿನ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಮಾರ್ಗಸೂಚಿ, ಮಾದರಿ ನೀತಿ ಸಂಹಿತೆ ಅನುಷ್ಟಾನ, ಕೋವಿಡ್-19 ಮಾರ್ಗಸೂಚಿಗಳ ಅನುಷ್ಟಾನ, ಚುನಾವಣಾ ಮತದಾನ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ(ಪ್ರಭಾರ) ಶೇಖರ್, ತಹಶೀಲ್ದಾರ್‍ಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.