ತುಮಕೂರು:
ಶಿಕ್ಷಣದಲ್ಲಿ ಹಿಂದುಳಿದಿರುವ ಗಾಣಿಗ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಲು ಸಮುದಾಯ ಮುಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ತಿಳಿಸಿದರು.
ನಗರದ ಮೆಳೇ ಕೋಟೆಯ ಅಭಯಾಂಜನೇಯಸ್ವಾಮಿ ದೇವಾಸ್ತಾನದ ಬಳಿ, ತುಮಕೂರು ಜಿಲ್ಲಾ ಗಾಣಿಗರ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ವೀಕ್ಷಿಸಿ ಅವರು ಮಾತನಾಡಿದರು.
ಕರ್ನಾಟಕದ ಗಾಣಿಗ ಸಮಾಜದ ಒತ್ತಾಯದ ಮೇರೆಗೆ ಸಮುದಾಯ ಭವನ ವೀಕ್ಷಿಸಲು ಬಂದಿದ್ದು, ಸಮುದಾಯ ಭವನದಿಂದ ಸಮುದಾಯದ ಅಭಿವೃದ್ಧಿಗೆ ಸಹಾಯವಾಗಲಿದೆ, ಸಮುದಾಯ ಭವನದೊಂದಿಗೆ ಮಕ್ಕಳ ಶಿಕ್ಷಣಕ್ಕೂ ಪ್ರಾಮುಖ್ಯತೆಯನ್ನು ನೀಡಬೇಕಿದೆ ಎಂದು ಹೇಳಿದರು.
ಸಮುದಾಯ ಭವನ ಅಥವಾ ದೇವಾಸ್ಥಾನ ಏನು ಮಾಡಿದರೂ ಅದು ಸಮುದಾಯದ ಅಭಿವೃದ್ಧಿಗೆ ಸಹಾಯಕವಾಗಲಿದೆ, ಹಾಗೆ ಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡ ಬೇಕಾದ ಹೊಣೆಗಾರಿಕೆಯೂ ನಮ್ಮೆಲ್ಲರ ಮೇಲಿದೆ ಎಂದರು.
ಸಮುದಾಯದಲ್ಲಿರುವ ಶ್ರೀಮಂತರು ಹಾಗೂ ಅಧಿಕಾರಿವರ್ಗ ಶಿಕ್ಷಣ ಕೊಡಿಸಲು ಅಶಕ್ತರಾಗಿರುವ ಸಮಾಜದ ಬಡ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದರು.
ತುಮಕೂರು ಜಿಲ್ಲಾ ಗಾಣಿಗರ ಸಂಘ ಜಿಲ್ಲಾಧ್ಯಕ್ಷ ಲೋಕೇಶ್ ಸಪ್ತಗಿರಿ ಮಾತನಾಡಿ ನೂತನ ಸಮುದಾಯ ಭವನದ ವೀಕ್ಷಣೆಗೆ ಪ್ರಧಾನಿ ಅವರ ಸಹೋದರರು ಆಗಮಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಮೋದಿಯವರು ಯಾವುದೇ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಇಂದಿಗೂ ಗಾಣಿಗ ಸಮುದಾಯ ಎಣ್ಣೆಯನ್ನು ತೆಗೆದು ಜೀವನ ನಡೆಸುತ್ತಿದ್ದಾರೆ, ಈ ಹಿಂದುಳಿದ ಸಮುದಾಯಕ್ಕೆ ಶಿಕ್ಷಣ ಅವಶ್ಯಕವಾಗಿದ್ದು, ಸಣ್ಣ ಸಮುದಾಯಕ್ಕೆ ಮೋದಿ ಅವರು ಸ್ವಾಭಿಮಾನದಿಂದ ಪ್ರಧಾನಿಯಾದಂತೆ, ನಾವು ಸಹ ಶ್ರೀಯುತ ಪ್ರಹ್ಲಾದ್ ಮೋದಿ ಅವರು ಹೇಳಿದಂತೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಪರಸ್ಪರ ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ ಕರೆ ನೀಡಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ ದಾಮೋದರ ದಾಸ್ ಮೋದಿ ಅವರನ್ನು ಸಮುದಾಯದ ವತಿಯಿಂದ ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಗೋಪಿನಾಥ್, ನಾರಾಯಣಪ್ಪ, ರಾಮ್ ಮೋಹನ್, ರಾಜಶೇಖರ್ ಗಾಣಿಗ, ಮಲ್ಲೇಶ್, ಶಿವಣ್ಣ, ದೀಪು, ನಾರಾಯಣಶೆಟ್ಟಿ, ಪುಟ್ಟಣ್ಣ, ಪರಮೇಶ್, ರಘು, ದಿನೇಶ್ ಸೇರಿದಂತೆ ಇತರರಿದ್ದರು.