ಹುಳಿಯಾರು:
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 2 ನೇ ಹಂತದ ಚುನಾವಣೆ ನಡೆಯಲಿದ್ದು ಇದಕಾಗಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಿದೆ.
ಡಿ.11 ರಿಂದ ಡಿ. ಡಿ.16 ರ ವರೆವಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದರಿಂದ ವಿವಿಧ ಪಂಚಾಯಿತಿಗಳಲ್ಲಿ ನೇಮಕಗೊಂಡ ಮತಗಟ್ಟೆ ಅಧಿಕಾರಿಗಳು ನಾಮಪತ್ರ ಸ್ವೀಕಾರಕ್ಕೆ ವೇದಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಕಾಕ್ಷಿಗಳು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಚುನಾವಣಾ ಕಾರ್ಯವನ್ನು ನಿಭಾಯಿಸಲಾಗುತ್ತಿದೆ. ಹಾಗೆಯೇ ಕಚೇರಿಗೆ ಬರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿಕೊಳ್ಳುವುದು ಸೇರಿ ಇನ್ನಿತರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗುತ್ತಿದೆ.
ಅಲ್ಲದೆ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯೂ ಸಹ ಚುನಾವಣೆಗೆ ಸ್ಪರ್ಧಿಸಬಹುದಾಗಿದ್ದು ನಾಮಪತ್ರವನ್ನು ಸೂಚಕರ ಮೂಲಕ ಸಲ್ಲಿಸಬೇಕಿದೆ. ಶೌಚಾಲಯ ಇಲ್ಲದವರು 1 ವರ್ಷದ ಬಳಿಕ ಕಟ್ಟುವ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸಬಹುದಾಗಿದೆ. ಬಹುಮುಖ್ಯವಾಗಿ ಗ್ರಾಮ ಪಂಚಾಯ್ತಿಯ ನೀರು, ಮನೆ ಸೇರಿದಂತೆ ಇತರೆ ಕಂದಾಯಗಳನ್ನು ಪಾವತಿಸಬೇಕಿದೆ.
ಸುವ್ಯವಸ್ಥಿತ ಚುನಾವಣೆ ನಡೆಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದ್ದು ಪಂಚಾಯ್ತಿ ಪ್ರವೇಶಿಸುವ ಪ್ರತಿಯೊಬ್ಬರ ಕೈಗೂ ಸ್ಯಾನಿಟೈಸರ್ ಹಾಕಲಾಗುತ್ತಿದೆ. ಇಬ್ಬರು ಚುನಾವಣಾ ಸಿಬ್ಬಂದಿ, ಪಿಡಿಓ, ಕಂಪ್ಯೂಟರ್ ಆಪರೇಟರ್ ಸಹಾಯಕ್ಕೆ ಸಿದ್ಧರಿದ್ದಾರೆ. ಇವರು ಫೇಸ್ಕ್ ಮಾಸ್ಕ ಹಾಗೂ ಕೈಗಳಿಗೆ ಗ್ಲೌಸ್‍ಗಳನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಲ್ಲೆಲ್ಲಿ 2 ನೇ ಹಂತದ ಚುನಾವಣೆ: ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ
ಚುನಾವಣಾ ಪ್ರಕ್ರಿಯೆ ಏನೇನು:
ಎರಡನೇ ಹಂತದ ಮತದಾನಕ್ಕೆ ಡಿ.11 ರಿಂದ 16 ರ ವರೆವಿಗೆ ನಾಮಪತ್ರ ಸಲಿಸಬಹುದು. ಡಿ.17 ರಂದು ನಾಮಪತ್ರಗಳ ಪರಿಶೀಲನೆ ನಡೆಲಿದೆ. ಡಿ.19 ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿ.27 ರಂದು ಮತದಾಣ ನಡೆಯಲಿದೆ. ಮರು ಮತದಾನಕ್ಕೆ ಅಗತ್ಯವಿದ್ದರೆ 29 ರಂದು ಅವಕಾಶ ಕಲ್ಪಿಸಲಾಗುವುದು. ಡಿ.30 ರಂದು ಮತ ಎಣಿಕೆ ನಡೆಯಲಿದೆ.