ತುಮಕೂರು:

      ತುಮಕೂರು ಮಹಾನಗರ ಪಾಲಿಕೆ, ರಾಕ್ ಯೂತ್ ಕ್ಲಬ್ ಸಹಯೋಗದಲ್ಲಿ ಸ್ಚಚ್ಛ ಸರ್ವೇಕ್ಷಣಾ ಅಭಿಯಾನದ ಅಂಗವಾಗಿ ಏರ್ಪಡಿಸಿರುವ ಮೇಯರ್ಸ್ ಕಪ್ 2020 ಕ್ರೀಡಾಕೂಟಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗಶ್ರೀಗಳು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

      ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಸ್ವಾಸ್ಥ್ಯ ಪಡೆಯಲು ಸಾಧ್ಯವಿದ್ದು, ತುಮಕೂರು ನಗರದಲ್ಲಿ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು, ಈ ನಿಟ್ಟಿನಲ್ಲಿ ಕ್ರೀಡಾ ಸಂಘಗಳು ಹಾಗೂ ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ಸಲಹೆ ನೀಡಿದರು.

      ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಳವಾಗಲಿದ್ದು, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು- ಗೆಲುವು ಮುಖ್ಯವಲ್ಲ, ಕ್ರೀಡೆಯಿಂದ ಸಮಯ ಪ್ರಜ್ಞೆ, ಶಿಸ್ತು ಬೆಳೆಯುವುದಲ್ಲದೇ, ಸೋಲನ್ನು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಯುವುದು ಎಂದು ಹೇಳಿದರು.

      ಕೋವಿಡ್ ಸಂದರ್ಭದಿಂದ ಮನೆಯಲ್ಲಿ ಉಳಿದಿರುವವರು ಹೊರಗೆ ಬಂದು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಪ್ರಾರಂಭಗೊಂಡಿರುವ ಮೇಯರ್ ಕಪ್ ಮುಂದುವರೆಸಬೇಕು, ಕ್ರೀಡಾಪಟುಗಳು ಉತ್ಸಾಹ ಕಳೆದುಕೊಳ್ಳದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸ ಬೇಕು ಎಂದು ಹಾರೈಸಿದರು.

      ಮೇಯರ್ ಫರೀದಾ ಬೇಗಂ ಮಾತನಾಡಿ ಈ ವರ್ಷ ಪ್ರಾರಂಭವಾಗಿರುವ ಕ್ರೀಡಾ ಸಪ್ತಾಹದಲ್ಲಿ ಪಾಲಿಕೆ ಸಿಬ್ಬಂದಿಗಳಿಗೂ ಹಾಗೂ ಕ್ರೀಡಾಕೂಟದ ಮೂಲಕ ಪಾಲಿಕೆ ಸಿಬ್ಬಂದಿಗೆ ಮಾನಸಿಕ ಒತ್ತಡ ನಿವಾರಣೆಯಾಗಲಿದ್ದು, ಸ್ವಚ್ಛ ಭಾರತ ಸರ್ವೇಕ್ಷಣಾ ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂಬ ಸುದುದ್ದೇಶದಿಂದ ಕ್ರೀಡಾ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ ಎಂದರು.

       ಕೋವಿಡ್ ಶುರುವಾಗಿನಿಂದಲೂ ಕೋವಿಡ್ ವಾರಿಯರ್ಸ್‍ಗಳಾಗಿ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ನೌಕರರು ಕಾರ್ಯನಿರ್ವಹಿಸಿದ್ದು, ಕಳೆದ ಒಂಭತ್ತು ತಿಂಗಳಿಂದ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವವರಿಗೆ ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ, ಮಹಾನಗರ ಪಾಲಿಕೆ ಕ್ರೀಡಾ ಅನುದಾನದಲ್ಲಿ ಈ ಕ್ರೀಡಾ ಸಪ್ತಾಹವನ್ನು ಆಯೋಜಿಸಿದ್ದು, ಪಾಲಿಕೆಯ ಸದಸ್ಯರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

      ಕಬ್ಬಡಿ ತರಬೇತುದಾರ ಇಸ್ಮಾಯಿಲ್ ಮಾತನಾಡಿ ಟೂರ್ನಿಯಲ್ಲಿ ಜಿಲ್ಲೆಯ ಎಂಟು ತಂಡಗಳು ಭಾಗವಹಿಸಿದ್ದು, ಎರಡು ದಿನಗಳು ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತರಾದ ತಂಡಕ್ಕೆ ಒಂದು ಲಕ್ಷ ಪ್ರಥಮ ಬಹುಮಾನವನ್ನು ನೀಡಲಾಗುವುದು, ಡಿ.14ರಿಂದ 16ರವರೆಗೆ ಸಪ್ತಾಹದಲ್ಲಿ ಪೌರ ಕಾರ್ಮಿಕರು, ಸದಸ್ಯರು ಹಾಗೂ ಸಿಬ್ಬಂದಿಗೆ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು, ನಂತರ 2 ದಿನ ಕಬ್ಬಡಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಕಬ್ಬಡಿಯಲ್ಲಿ ವಿಜೇತರಾದ ತಂಡಕ್ಕೆ ಒಂದು ಲಕ್ಷರೂ ಪಾರಿತೋಷಕವನ್ನು ನೀಡಲಾಗುವುದು ಎಂದು ಹೇಳೀದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.

(Visited 10 times, 1 visits today)