ತುಮಕೂರು :
ಜಿಲ್ಲೆಯಲ್ಲಿ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸದಸ್ಯರ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ/ ಬಲವಂತದ ಅವಿರೋಧ ಆಯ್ಕೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಅಂತಹ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಗ್ರಾಮಪಂಚಾಯತಿ ಚುನಾವಣೆ ಸಂಬಂಧ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳು ಮತ್ತು ನೋಡೆಲ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಗ್ರಾಮಪಂಚಾಯತಿಗಳ ಸದಸ್ಯರ ಸ್ಥಾನಗಳಿಗೆ ಹರಾಜು/ಅವಿರೋಧ ಆಯ್ಕೆಯಾಗುವುದಕ್ಕೆ ಒಪ್ಪಂದ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ/ದೂರುಗಳು ಬಂದಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ನಿಜವೆಂದು ಕಂಡು ಬಂದರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲು ಈಗಾಗಲೇ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ರವರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗಿದೆ ಎಂದರು.
ಹರಾಜು ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ. ತುರುವೇಕೆರೆ ತಾಲ್ಲೂಕಿನ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಮೇಲೆ ಎಫ್ಐಆರ್ ದಾಖಲಿಸಿ ಎಂದು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಮತದಾನ ನಡೆಸಲು ಮತಗಟ್ಟೆ ಸಿಬ್ಬಂದಿಗೆ ತರಬೇತಿ ಅತಿಮುಖ್ಯ. ಚುನಾವಣಾ ವೇಳಾಪಟ್ಟಿಯಂತೆ ಚುನಾವಣಾಧಿಕಾರಿಗಳು ಕರ್ತವ್ಯಗಳನ್ನು ನಿರ್ವಹಿಸಬೇಕು. ಮತಗಟ್ಟೆ ಸಿಬ್ಬಂದಿಗಳು ಚುನಾವಣಾ ತರಬೇತಿಗೆ ಗೈರುಹಾಜರಾದರೆ ಅಂತಹ ಸಿಬ್ಬಂದಿಗಳ ಮೇಲೆ ಚುನಾವಣಾ ಮಾರ್ಗಸೂಚಿಗಳನ್ವಯ ಕ್ರಮಕೈಗೊಳ್ಳಿ ಎಂದು ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ/ಅನುಷ್ಟಾನ ಕುರಿತಂತೆ ಪ್ರತಿದಿನ ವರದಿಯನ್ನು ಕಳುಹಿಸಬೇಕು ಹಾಗೂ ಪ್ರಪತ್ರ-10ರಲ್ಲಿ ಪ್ರಕಟಿಸಿರುವ ಹೆಸರಿನ ರೀತಿಯಲ್ಲಿಯೇ ಮತಪತ್ರದಲ್ಲೂ ಮುದ್ರಣ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ಶಿರಾ ತಾಲ್ಲೂಕಿನ ಗೋಪಾಲದೇವರಹಳ್ಳಿ ಸೇರಿದಂತೆ ಜಿಲ್ಲೆಯ ಕೆಲವು ಕಡೆ ನಾಮಪತ್ರ ಸಲ್ಲಿಕೆ ಮಾಡುತ್ತಿಲ್ಲ. ಅಂತಹ ಸ್ಥಳಗಳಿಗೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳು ತೆರಳಿ ಮನವೊಲಿಕೆಗೆ ಮುಂದಾಗಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಚುನಾವಣಾ ಶಾಖೆಯ ನಾಗಭೂಷಣ್, ರವಿ, ಮತ್ತಿತರರು ಹಾಜರಿದ್ದರು.