ತುಮಕೂರು : 

      ಭಾರತ ಸರಕಾರದ ಸ್ವಚ್ಛ ಸರ್ವೆಕ್ಷಣ ಅಭಿಯಾನ-2020ರಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್ ನಂತಹ ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ವನ್ನು ಯಶಸ್ವಿಗೊಳಿಸುವಂತೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಫರೀಧಾ ಬೇಗಂ ಯುವಜನರಿಗೆ ಕರೆ ನೀಡಿದ್ದಾರೆ.

      ನಗರದ ಎಸ್.ಎಸ್.ಸರ್ಕಲ್‍ನಲ್ಲಿರುವ 4ನೇ ಎನ್.ಸಿ.ಸಿ. ಬ್ಯಾಟಾಲಿಯನ್ ಕಚೇರಿ ಆವರಣದಲ್ಲಿ ನಗರಪಾಲಿಕೆ, ಎನ್.ಸಿ.ಸಿ. ತಂಡಗಳು ಆಯೋಜಿಸಿದ್ದ ಸ್ವಚ್ಛ ಸರ್ವೆಕ್ಷಣ ಅಭಿಯಾನ-2020ಯ 2ನೇ ಹಂತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೈನಿಕರಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಎನ್.ಸಿ.ಸಿ. ಯಂತಹ ಶಿಸ್ತುಬದ್ಧ ಸಂಸ್ಥೆಗಳು ಕೈಜೋಡಿಸಿದರೆ ಸರಕಾರ ಅಭಿಯಾನಗಳು ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತೇವೆ ಎಂಬ ನಂಬಿಕೆ ನಮ್ಮದು ಎಂದರು.

      ಸುಮಾರು 1000ಕ್ಕೂ ಹೆಚ್ಚು ಎನ್.ಸಿ.ಸಿ.ಕ್ಯಾಡೆಟ್‍ಗಳು ಈ ಅಭಿಯಾನದಲ್ಲಿ ಕಳೆದ ಒಂದು ವಾರದಿಂದ ನಗರದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ,ಗೋಡೆ ಚಿತ್ರ,ಪ್ರಬಂಧ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಕೈಜೊಡಿಸಿದ್ದಾರೆ.ಮುಂದೆಯೂ ನಿಮ್ಮಿಂದ ಹೆಚ್ಚಿನ ಸಹಕಾರವನ್ನು ಬಯಸುತ್ತೇವೆ. ಎರಡನೇ ಸ್ಥಾನದಲ್ಲಿರುವ ತುಮಕೂರು ನಗರ 2021ನೇ ಸಾಲಿನಲ್ಲಿ ಮೊದಲ ಸ್ಥಾನ ಪಡೆಯಲು ತಾವೆಲ್ಲರೂ ಪಾಲಿಕೆಯೊಂದಿಗೆ ಹೆಜ್ಜೆ ಹಾಕುವಂತೆ ಮೇಯರ್ ಫರೀಧಾ ಬೇಗಂ ಮನವಿ ಮಾಡಿದರು.

     ಸ್ವಚ್ಛತೆ ಎಂಬುದು ಮೊದಲು ನಮ್ಮ ಮನೆಯಿಂದ ಆರಂಭಗೊಳ್ಳಬೇಕು.ಆನಂತರ ನಮ್ಮ ಬೀದಿ,ಊರು, ಜಿಲ್ಲೆ, ರಾಜ್ಯ, ದೇಶ ಎಂಬ ರೀತಿ ಮುನ್ನೆಡೆಯಬೇಕು. ಯುವಜನರು ದೇಶದ ಅಭಿವೃದ್ದಿಗೆ ದುಡಿದರೆ, ದೇಶವೂ ಅವರ ಬೆಳವಣಿಗೆಗೆ ಸಹಕಾರ ನೀಡಲಿದೆ.ಈ ನಿಟ್ಟಿನಲ್ಲಿ ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲಿಯೂ ಮೂಡಬೇಕು.ಈ ನಿಟ್ಟಿನಲ್ಲಿ ಎನ್.ಸಿ.ಸಿ. ಪಾತ್ರ ಮಹತ್ವದ್ದು,ಇಂತಹ ಭಾವನೆಯನ್ನು ಮಕ್ಕಳಲ್ಲಿ ತುಂಬುವ ಎನ್.ಸಿ.ಸಿ.ಅಧಿಕಾರಿಗಳಿಗೂ, ತರಬೇತುದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮೇಯರ್ ತಿಳಿಸಿದರು.

      ಎನ್.ಸಿ.ಸಿ. ಅಧಿಕಾರಿ ಸುಬ್ಬೇದಾರ್ ಬಹುದ್ದೂರ್ ಸಿಂಗ್ ಮಾತನಾಡಿ,ನಮ್ಮ ಎನ್.ಸಿ.ಸಿ ಬೆಟಾಲಿಯನ್‍ನಲ್ಲಿ ಸುಮಾರು 1000 ಕೆಡೆಟ್‍ಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಕಳೆದ 7 ದಿನಗಳಿಂದ ಭಾರತ ಸರಕಾರದ ಸ್ವಚ್ಚ ಸರ್ವೆಕ್ಷಣ ಅಭಿಯಾನದ ಕುರಿತು ಸಂಸ್ಥೆ ಏರ್ಪಡಿಸಿದ್ದ ಪ್ರಭಂದ ಸ್ಪರ್ಧೆ, ಗೋಡೆಗಳ ಚಿತ್ರ ಬರೆಯುವುದು, ಚಿತ್ರಕಲಾ ಸ್ಪರ್ಧೆಯಲ್ಲಿ ಬಹಳ ಸ್ಪೂರ್ತಿಯಿಂದ ಭಾಗವಹಿಸಿ, ಉತ್ತಮ ಚಿತ್ರಗಳನ್ನು ರಚಿಸಿದ್ದಾರೆ.ಭಾಗವಹಿಸಿದ್ದರಿಗೆ ಮೂರು ಬಹುಮಾನ ನೀಡಲಾಗುವುದು. ಬಹುಮಾನ ಬರದಿದ್ದವರು ನಿರಾಶರಾಗುವುದು ಬೇಡ. ನಿರಂತರ ಪ್ರಯತ್ನವಿದ್ದರೆ ಒಂದು ದಿನ ಗುರಿ ಮುಟ್ಟಲು ಸಾಧ್ಯ.ನಗರವನ್ನು ಸ್ವಚ್ಛವಾಗಿಡಲು, ವ್ಯವಸ್ಥಿತವಾಗಿ ಬೆಳೆಸಲು ನಿಮ್ಮ ಕೈಲಾದ ಸಹಕಾರವನ್ನು ಪಾಲಿಕೆ ನೀಡಿ ಎಂದು ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

       ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ರಾಮಲಿಂಗಾರೆಡ್ಡಿ ಮಾತನಾಡಿ,ಎನ್.ಸಿ.ಸಿ.ಕೆಡೆಟ್‍ಗಳು ಎರಡನೇ ಹಂತದ ಸೈನಿಕರಿದ್ದಂತೆ, ಒಮ್ಮೆ ಎನ್.ಸಿ.ಸಿ.ಗೆ ಸೇರ್ಪಡೆಗೊಂಡರೆ ಅಹಂ ಎನ್ನುವುದು ದೂರವಾಗಿ,ಸೇವಾ ಮನೋಭಾವನೆ ತಾನಾಗಿಯೇ ಒಡಮೂಡುತ್ತದೆ.ಎನ್.ಸಿ.ಸಿ.ಯಲ್ಲಿ ಎ.ಬಿ.ಸಿ. ಸರ್ಟಿಪಿಕೇಟ್ ಹೊಂದಿರುವ ವಿದ್ಯಾರ್ಥಿಗಳಿಗೆ ಮೆಡಿಕಲ್,ಇಂಜಿನಿಯರಿಂಗ್ ಪ್ರವೇಶಕ್ಕೆ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ.ಸರಕಾರಿ ನೌಕರಿ,ಅದರಲ್ಲಿಯೂ ಸೇನೆಗೆ ಸೇರುವವರಿಗೆ ಹೆಚ್ಚಿನ ಅವಕಾಶ ವಿದೆ.ಇದುವರೆಗೂ ತುಮಕೂರು ಬೆಟಾಲಿಯನ್‍ನಿಂದ 9 ಜನರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

      ಕಳೆದ ಏಳು ದಿನಗಳಿಂದ ತುಮಕೂರು ನಗರದಲ್ಲಿ ರಸ್ತೆ ಸ್ವಚ್ಚತೆ,ಪಾರ್ಕುಗಳ ನಿರ್ವಹಣೆ ಸೇರಿದಂತೆ ಹಲವಾರು ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಕೋವಿಡ್-19 ಸಂದರ್ಭದಲ್ಲಿಯೂ ನಮ್ಮ ಕೆಡೆಟ್‍ಗಳು 15ಕ್ಕೂ ಹೆಚ್ಚು ಜಾಗೃತಿ ರ್ಯಾಲಿಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ..ಭಾರತ ಸರಕಾರದ ಸ್ವಚ್ಚ ಸರ್ವೆಕ್ಷಣ ಅಭಿಯಾನ-2020ರಲ್ಲಿ ನಾವುಗಳು ಪಾಲ್ಗೊಂಡು, ತುಮಕೂರು ನಗರವನ್ನು ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸುವುದಾಗಿ ಲೆಪ್ಟಿನೆಂಟ್ ರಾಮಲಿಂಗಾರೆಡ್ಡಿ ತಿಳಿಸಿದರು.

      ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಹಾಗೂ ಮಾಜಿ ಉಪಮೇಯರ್ ರೂಪಶ್ರೀ,ಎನ್.ಸಿ.ಸಿ.ಅಧಿಕಾರಿಗಳಾದ ಪ್ರಭುದೇವ್, ನಾಗರಾಜು, ಅನಿಲ್,ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು. 

(Visited 22 times, 1 visits today)