ತುಮಕೂರು :
ಸಕಾಲ ಸಪ್ತಾಹದಲ್ಲಿ “ಸಕಾಲ”ದ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಬಾಕಿ ಇರುವ ಸಕಾಲದ ಅರ್ಜಿಗಳನ್ನು ವಿಲೇವಾರಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಕಾಲ ಮಿಷನ್‍ನ ಅಡಿಷನಲ್ ಮಿಷನ್ ಡೈರೆಕ್ಟರ್ ಡಾ: ಬಿ.ಆರ್. ಮಮತ ಅವರು ತಿಳಿಸಿದರು.
ಸಕಾಲ ಸಪ್ತಾಹದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಗೆ ಇಂದು ಭೇಟಿ ನೀಡಿ ಸಕಾಲ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನದ 174 ಅರ್ಜಿಗಳು ಸಕಾಲದಡಿ ವಿಲೇವಾರಿ ಮಾಡಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇವೆ. ಈ ಅರ್ಜಿಗಳನ್ನು ಒಂದು ವಾರದೊಳಗೆ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು.
ಇಲಾಖೆಯಲ್ಲಿ ಲಭ್ಯವಿರುವ ಸಕಾಲ ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಛೇರಿಯ ಮುಂದೆ ಮಾಹಿತಿ ಫಲಕ ಪ್ರದರ್ಶಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
“ಸಕಾಲ” ಸೇವೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆ ಮೂಲಕ ಜನರು ಸಕಾಲ ಸೇವೆಯನ್ನು ಸ್ವಯಂ ಕೇಳಿ ಪಡೆಯುವಂತಾಗಬೇಕು. ಅಷ್ಟರಮಟ್ಟಿಗೆ ಜನರನ್ನು ಸಕಾಲದ ಕುರಿತು ಜಾಗೃತಿಗೊಳಿಸಬೇಕು ಎಂಬುದು ಸಪ್ತಾಹದ ಆಶಯವಾಗಿದೆ ಎಂದರು.
ಸಕಾಲ ಸಪ್ತಾಹದಲ್ಲಿ ಬಾಕಿ ಕಡತಗಳ ವಿಲೇವಾರಿ ಕುರಿತಂತೆ ಪರಿಶೀಲಿಸಲು ರಾಜ್ಯ ಮಟ್ಟದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಅದೇರೀತಿಯಲ್ಲಿ ಜಿಲ್ಲಾ ಮಟ್ಟದಲ್ಲೂ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲು ಸೂಚಿಸಲಾಗಿದೆ. ಈ ತಂಡಗಳು ವಿವಿಧ ಇಲಾಖೆಗಳಿಗೆ ತೆರಳಿ ಪರಿಶೀಲನೆ ನಡೆಸಲಿವೆ ಎಂದರು.
ಸಕಾಲದಡಿ ಅರ್ಜಿಗಳನ್ನು ನಿಗಧಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ವಿಲೇವಾರಿಗೆ ಕ್ರಮಕೈಗೊಳ್ಳದ ಅಧಿಕೃತ ಅಧಿಕಾರಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಾಂತ್ರಿಕ ಸಹಾಯಕ ರಿಜ್ವಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.