ತುಮಕೂರು :
ತ್ರಿವಿಧ ದಾಸೋಹಮೂರ್ತಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಕ್ಯಾತ್ಸಂದ್ರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನಾ ಸತ್ಯಾಗ್ರಹ ನಡೆಸಿದರು.
ನಗರದ ಕ್ಯಾತ್ಸಂದ್ರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಯ ಮೇಲೆ ಕುಳಿತು ಸತ್ಯಾಗ್ರಹ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಗಳು ದೇಶ ಕಂಡಂತಹ ಉತ್ತಮ ಆದರ್ಶ, ಅದ್ಭುತವಾದಂತಹ ವ್ಯಕ್ತಿತ್ವವುಳ್ಳವರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ರಾಜಕೀಯ ಪಕ್ಷಗಳವರು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ ಶ್ರೀಗಳ ಪ್ರಭಾವವನ್ನು ಬಳಸಿಕೊಂಡಿದ್ದಾರೆ. ಆದರೆ ಶ್ರೀಗಳಿಗೆ ಭಾರತ ರತ್ನ ಕೊಡಿಸುವ ಬಗ್ಗೆ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಿದ್ದಗಂಗಾ ಮಠಕ್ಕೆ ಬಂದು ಹೋಗಿದ್ದಾರೆ. ಆದರೂ ಭಾರತ ರತ್ನ ಪ್ರಶಸ್ತಿ ನೀಡುವ ಕುರಿತು ಯಾವುದೇ ಚಕಾರ ಎತ್ತಿಲ್ಲ. ಹಾಗೆಯೇ ಯಡಿಯೂರಪ್ಪನವರು ಸಿದ್ದಗಂಗಾ ಮಠದಿಂದಲೇ ಮುಖ್ಯಮಂತ್ರಿಯಾದರು ಎಂಬುದು ಸತ್ಯ. ಆದರೂ ಶ್ರೀಗಳ ಸೇವೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗ ಭಾರತ ರತ್ನ ಕೊಡಿಸಲು ಅವರೂ ಕೂಡ ಮುಂದಾಗಲಿಲ್ಲ. ಯಡಿಯೂರಪ್ಪನವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಶ್ರೀಗಳಿಗೆ ಪ್ರಶಸ್ತಿ ಕೊಡಿಸಬಹುದಿತ್ತು ಎಂದರು.
ನೆರೆಯ ಆಂಧ್ರ, ತಮಿಳುನಾಡು ಮತ್ತು ದೇಶದ ಅನೇಕ ಕಡೆ ಮಹನೀಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಧಾನ ಮಂತ್ರಿಗಳು ಈ ಕೂಡಲೇ ತಮ್ಮ ನಾಟಕವನ್ನು ಬಿಡಬೇಕು. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಮಂತ್ರಿ ಮಂಡಲ ಸಭೆಯಲ್ಲಿ ಶ್ರೀಗಳಿಗೆ ಭಾರತ ರತ್ನ ಕೊಡುವ ಸಂಬಂಧ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಶ್ರೀಗಳಿಗೆ ಭಾರತ ರತ್ನ ಕೊಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹಾಗೂ ಲೋಕಸಭಾ ಸದಸ್ಯರಿಂದಲೂ ರಾಜೀನಾಮೆ ಕೊಡಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಒತ್ತಡ ಹೇರಬೇಕು ಎಂದರು.
ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಭಾರತ ರತ್ನ ಕೊಡಿಸಲು ಆಗುವುದಿಲ್ಲ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ನಮ್ಮ ಸರ್ಕಾರ ಬಂದರೆ ಶ್ರೀಗಳಿಗೆ ಮೊದಲು ಭಾರತ ರತ್ನ ಪ್ರಶಸ್ತಿ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಹೇಳಿದ ಮಾತನ್ನು ಅವರೂ ಮರೆತು ಬಿಟ್ಟರು ಎಂದರು.
ಉಗ್ರ ಹೋರಾಟ:
ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲೇಬೇಕು ಎಂಬುದು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಒಕ್ಕೂಟಗಳ ಆಗ್ರಹವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಜನವರಿ 26ರ ನಂತರ ಉಗ್ರ ಹೋರಾಟ ನಡೆಸುವುದಾಗಿ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈಲು ಹಳಿಯ ಮೇಲೆ ಸತ್ಯಾಗ್ರಹ:
ರಾಜ್ಯದಲ್ಲಿ ಮರಾಠಿ ಪ್ರಾಧಿಕಾರ ರಚನೆ ಮುಂದಾಗಿರುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇದನ್ನು ವಿರೋಧಿಸಿ ಎರಡನೇ ಹಂತವಾಗಿ ಜ. 9 ರಂದು ರಾಜ್ಯದ ಉದ್ದಗಲಕ್ಕೂ ರೈಲು ಹಳಿಯ ಮೇಲೆ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಜ. 9 ರಂದು ರಾಜ್ಯದ ಸುಮಾರು 500 ಕಡೆ ರೈಲ್ವೆ ಹಳಿಗಳ ಮೇಲೆ ಸತ್ಯಾಗ್ರಹ ನಡೆಸಲಾಗುವುದು. ಈ ಸತ್ಯಾಗ್ರಹದಲ್ಲಿ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದು, ಮೆರವಣಿಗೆಯಲ್ಲಿ 1 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಜ. 9 ರಂದು ರೈಲು ಸಂಚಾರ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರೈಲ್ವೆ ನಿಲ್ದಾಣಕ್ಕೆ ಬರಬಾರದು ಎಂದು ಮನವಿ ಮಾಡಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ನಾವು ಕೈಗೊಂಡಿದ್ದ ಮೊದಲ ಹೋರಾಟಕ್ಕೆ ಜನರ ಸ್ಪಂದನೆ ನೂರಕ್ಕೆ ನೂರರಷ್ಟು ವ್ಯಕ್ತವಾಯಿತು. ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ವಾಧಿಕಾರಿ ಧೋರಣೆ ತಾಳಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಾ ನಮ್ಮ ಹೋರಾಟವನ್ನು ತಡೆಯಲು ಪೊಲೀಸರ ಮೂಲಕ ನಮ್ಮ ಮೇವೆ ದಾಳಿ ಮಾಡಿಸಿದರು. ಆದರೆ ನಮ್ಮ ಹೋರಾಟವೇನು ವಿಫಲವಾಗಲಿಲ್ಲ ಎಂದರು.
ಕ್ಯಾತ್ಸಂದ್ರದಿಂದ ಸಿದ್ದಗಂಗಾ ಮಠಕ್ಕೆ ತೆರಳು ಮಾರ್ಗದಲ್ಲಿ ಒಂದು ಅದ್ಭುತವಾದ ಹೆಬ್ಬಾಗಿಲು ನಿರ್ಮಾಣ ಮಾಡಬೇಕು ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರವನ್ನು ಇಂದಿಲ್ಲಿ ಒತ್ತಾಯಿಸಿದರು.
ಸಿದ್ದಗಂಗಾ ಕ್ಷೇತ್ರ ಇಡೀ ದೇಶಕ್ಕೆ ಹೆಸರುವಾಸಿ. ಇಂಥ ಪವಿತ್ರ ಕ್ಷೇತ್ರ ಪ್ರವೇಶಿಸುವ ಕ್ಯಾತ್ಸಂದ್ರ ಬಳಿ ಒಂದು ಬೃಹದಾಕಾರದ ಹೆಬ್ಬಾಗಿಲು ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಇದುವರೆಗೂ ಗಮನ ಹರಿಸಿಲ್ಲ. ಕೂಡಲೇ ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ಹೆಬ್ಬಾಗಿಲು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸೇತುವೆ ನಿರ್ಮಾಣಕ್ಕೆ ಕಾರಣಕರ್ತ ವಾಟಾಳ್ ನಾಗರಾಜ್. ಶ್ರೀಗಳು ಲಿಂಗೈಕ್ಯರಾದ ದಿನ ನಾನು ಸಿದ್ದಗಂಗೆಗೆ ಬಂದಿದ್ದ ಸಂದರ್ಭದಲ್ಲಿ ಮಾಧ್ಯಮದವರ ಮುಂದೆ ಇಲ್ಲಿ ರೈಲ್ವೆ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದೆ ಎಂದರು.
ಶ್ರೀಮಠಕ್ಕೆ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಹಾಗಾಗಿ ಇಲ್ಲಿ ಸೇತುವೆ ನಿರ್ಮಾಣವಾಗಲೇಬೇಕು ಎಂದು ರೈಲ್ವೆ ನಿಲ್ದಾಣದಲ್ಲಿ ಸತ್ಯಾಗ್ರಹ ನಡೆಸಿದ್ದೆ. ಅದರ ಪರಿಣಾಮ ಈಗ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಇದು ನಿಜಕ್ಕೂ ಸಂತಸದ ಸಂಗತಿ ಎಂದರು.