ಗುಬ್ಬಿ:
ತಾಲ್ಲೂಕಿನ ಕಲ್ಲೂರು ಗ್ರಾಮದ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಅರೋಪ ಕೆಲ ಕಾಲ ಗೊಂದಲ ಉಂಟು ಮಾಡಿದ್ದು ಹೊರತು ಪಡಿಸಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿ ಯುತವಾಗಿ ಮತ ದಾನ ನಡೆದಿದೆ.
ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿ ಹೊರತಾಗಿ ಉಳಿದಂತೆ ತಾಲ್ಲೂಕಿನ 32 ಪಂಚಾಯಿತಿ ವ್ಯಾಪ್ತಿಯ 300 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆದು ಸಂಜೆ 4 ರ ವೇಳೆಗೆ ಶೇ.75 ಕ್ಕೂ ಅಧಿಕ ಮತದಾನ ನಡೆದಿರುವ ಅಂಕಿಅಂಶ ತಿಳಿದಿದೆ. ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಪ್ರಕ್ರಿಯೆಯು ಬೆಳಿಗ್ಗೆ 11 ರ ವೇಳೆಗೆ ಶೇ.22 ರಷ್ಟು ಮತದಾರರು ಮತಗಟ್ಟೆಗೆ ತಲುಪಿದ್ದರು. ಮದ್ಯಾಹ್ನ 1 ರ ಸಮಯಕ್ಕೆ ಶೇ. 45 ರಷ್ಟು ಮತದಾನ ವರದಿಯಾಗಿತ್ತು.
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 25 ಗ್ರಾಮ ಪಂಚಾಯಿತಿಯಲ್ಲಿ ಬಿರುಸಿನ ಚಟುವಟಿಕೆ ಕಂಡು ಬಂದಿದೆ. ಉಳಿದ 7 ಪಂಚಾಯಿತಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟು ಅಲ್ಲಿ ಪ್ರತಿಷ್ಠೆಯ ಕಣವಾಗಿ ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ. ಸಂಜೆ ವೇಳೆಗೆ ಮತದಾರರ ಹುಡುಕಿ ಕರೆ ತರುವ ಕೆಲಸವನ್ನು ಅಭ್ಯರ್ಥಿಗಳು ನಡೆಸಿದ್ದು ಕಂಡಿದೆ. ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಎಲ್ಲಿಯೂ ಅಹಿತಕರ ಘಟನೆಗೆ ಪೊಲೀಸ್ ಸಿಬ್ಬಂದಿ ಆಸ್ಪದ ನೀಡಿಲ್ಲ.
ಚುನಾವಣಾಧಿಕಾರಿಗಳು ಮತಗಟ್ಟೆಯಲ್ಲಿ ಕೊರೋನಾ ನಿಯಮಗಳ ಪಾಲನೆಗೆ ಸ್ಯಾನಿಟೇಜರ್ ಬಳಕೆ ಹಾಗೂ ಮಾಸ್ಕ್ ಕಡ್ಡಾಯ ಧರಿಸುವ ಬಗ್ಗೆ ಎಚ್ಚರಿಕೆ ವಹಿಸಿದ್ದರು. ಸಾಮಾಜಿಕ ಅಂತರ ಮಾತ್ರ ಸರದಿಯಲ್ಲಿ ಮಾಯವಾಗಿದ್ದು ಅಲ್ಲಲ್ಲಿ ಕಂಡು ಬಂದಿದೆ.