ತುಮಕೂರು:
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಡಿಸೆಂಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಮಧುಗಿರಿಯ ಕೆ.ಆರ್. ಬಡಾವಣೆ ಸರ್ಕಾರಿ ಪ್ರೌಢಶಾಲೆ(ಡಿಡಿಪಿಐ ಕಚೇರಿ ಮುಂಭಾಗ)ಯಲ್ಲಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಪ್ರಬಂಧ, ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್, ರಸಪ್ರಶ್ನೆ, ಮತ್ತಿತರ ಸ್ಪರ್ಧೆಗಳನ್ನು ನಡೆಸಲಾಗುವುದು. ನೂತನ ಹಾಗೂ ಭವಿಷ್ಯ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಶಾಲಾ ಹಂತ ಮತ್ತು ತಾಲೂಕು ಹಂತಗಳಲ್ಲಿ ಈಗಾಗಲೇ ಸ್ಪರ್ಧೆಗಳನ್ನು ನಡೆಸಲಾಗಿದೆ. ತಾಲೂಕು ಹಂತದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.
ಮತದಾನದಲ್ಲಿ ಇವಿಎಂ ಮತ್ತು ವಿ.ವಿ.ಪ್ಯಾಟ್‍ಗಳ ಪ್ರಾಮುಖ್ಯತೆ, ಶಿಕ್ಷಣ ವ್ಯವಸ್ಥೆಯಲ್ಲಿ ಮತದಾ ರರ ಶಿಕ್ಷಣ ಮತ್ತು ಭಾಗವಹಿಸುವಿಕೆ ಬಹಳ ಅವಶ್ಯಕತೆ, ಕೋವಿಡ್-1 9 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಚುನಾವಣೆಯನ್ನು ಹೇಗೆ ನಡೆಸಬಹುದು ಹಾಗೂ ಒಳಗೊಳಿಸುವ ಚುನಾವಣೆಗಳು ಕುರಿತು ಪ್ರಬಂಧ ಸ್ಪರ್ಧೆ; ಮತದಾರರ ಜಾಗೃತಿ ಮತ್ತು ಚುನಾವಣೆಗೆ ಸಂಬಂಧಿಸಿದ ವಿಷಯ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುವುದು.
ಅದೇ ರೀತಿ ಪ್ರಜಾಪ್ರಭುತ್ವ-ಚುನಾವಣೆಗಳಲ್ಲಿ ಮತದಾರರ ಪಾತ್ರ, ಚುನಾವಣೆಗಳಲ್ಲಿ ಮತದಾರರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು, ಕೋವಿಡ್-19 ಪ್ರಯುಕ್ತ ಚುನಾವಣೆಗಳಲ್ಲಿ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಸುಗಮ ಚುನಾವಣೆಗಳು ಹಾಗೂ ನೈತಿಕ ಚುನಾವಣೆಗಳ ಕುರಿತು ಬಿತ್ತಿಚಿತ್ರ ಮತ್ತು ಕೋಲಾಜ್ ತಯಾರಿಕೆ ಸ್ಪರ್ಧೆಯನ್ನು ನಡೆಸಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು ಅಗತ್ಯ ಸಾಮಾಗ್ರಿಗಳನ್ನು ತಾವೇ ತರತಕ್ಕದ್ದು. ಬಿತ್ತಿಚಿತ್ರವನ್ನು 22 x 28 ಇಂಚು ಅಳತೆಯ ಕಾಗದ ಬಳಸಿ ಬಿಡಿಸಬೇಕು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಒಬ್ಬ ಜವಾಬ್ದಾರಿಯುತ ಶಿಕ್ಷಕರೊಂದಿಗೆ ಬರಬೇಕು ಎಂದು ಮಧುಗಿರಿ ಡಿಡಿಪಿಐ ತಿಳಿಸಿದ್ದಾರೆ.