ಮಧುಗಿರಿ :
ರೈತಪರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರವು ಸದ್ಯ 6 ತಿಂಗಳಿಂದಲೂ ಯಾವುದೇ ರೀತಿಯ ಪಿಂಚಣಿಯನ್ನು ಸಹ ನೀಡಿಲ್ಲ. ರೈತ ವಿರೋಧಿಯಾಗಿ ಕೇಂದ್ರ ಸರ್ಕಾರ ಸಂಪೂರ್ಣ ವಿಫವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲ್ಲಾಳಿಗಳ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದರು.
ಪಟ್ಟಣದ ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ನಿವಾಸಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಇಂದು ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಅನ್ನದಾತನ ಶ್ರಮವನ್ನು ಮರೆಯಲಾಗದೆಂದು ಸ್ಮರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದಾರಾಮಯ್ಯ, ಕುಮಾರಸ್ವಾಮಿ ಸರ್ಕಾರದಲ್ಲಿ ನಾವು ರೈತರ ಸಾಲ ಮನ್ನಾ ಮಾಡಿದ್ದೆವು. ಈ ಬಗ್ಗೆ ಯಡೆಯೂರಪ್ಪ ಎಲ್ಲೂ ತುಟಿ ಬಿಚ್ಚಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತವಿರೋಧಿಯಾದ ಮೋದಿಯವರು ಕಾಪೆರ್Çೀರೇಟ್ ಉದ್ಯಮಿಗಳಿಗೆ ನೆರವಾಗುವಂತ ಕಾನೂನನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ದೆಹಲಿಯಲ್ಲಿ ಕಳೆದ 3 ವಾರದಿಂದ ರೈತರು ಮುಷ್ಕರ ಮಾಡುತ್ತಿದ್ದರೂ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಕೈಗಾರಿಕಾ ನೀತಿಯೂ ಸಹ ರೈತಪರವಾಗಿರುವಂತೆ ಹಿಂದೆ ಮಾಡಲಾಗಿತ್ತು. ಈಗ ಅದಕ್ಕೆಲ್ಲ ತಿಲಾಂಜಲಿ ಇಡಲು ಮುಂದಾಗಿದ್ದಾರೆ. ಶೇ.60 ರಷ್ಟು ಕಾರ್ಮಿಕರು ಕೃಷಿ ವಲಯವನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ಅಂತಹ ಕಾರ್ಮಿಕರೂ ಸಹ ಇಂದು ಅತಂತ್ರರಾಗಿದ್ದು, ನಿರುದ್ಯೋಗ ದೇಶದಲ್ಲಿ ಹೆಚ್ಚಾಗಿದೆ. ಇದಕ್ಕೆಲ್ಲ ಮೋದಿ ಸರ್ಕಾರದ ಆಡಳಿತವೇ ಕಾರಣವಾಗಿದೆ. ಸ್ವತಂತ್ರ ಬಂದಾಗಿನಿಂದಲೂ ರೈತರ ಸ್ಥಿತಿ ಸುಧಾರಣೆಯಾಗುತ್ತಿದ್ದು, ಈಗ ತುಂಬಾ ಸಂಕಷ್ಟದಲ್ಲಿದ್ದಾರೆ. ಹಸಿರುಕ್ರಾಂತಿ ಮಾಡಿ ಎಲ್ಲರ ಹೊಟ್ಟೆಗೆ ಅನ್ನ ನೀಡಿದ ರೈತನಿಗೆ ಅನುಕೂಲಕರ ವಾತಾವರಣ ಹಿಂದಿತ್ತು. ಆದರೆ ಈಗಿಲ್ಲದಾಗಿದೆ. 3 ಬಾರಿಯ ನೆರೆ, ಬರದಿಂದ ಜನತೆ ಹೈರಾಣಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ಮೋದಿ ಸಹ ರಾಜ್ಯದ ನೆರವಿಗೆ ಬಂದಿಲ್ಲ.
ರಾಜ್ಯ ಸರ್ಕಾರ ಕೂಡ ಜನರನ್ನು ಕೈಬಿಟ್ಟಿದ್ದಾರೆ. ಈ ಬಿಜೆಪಿ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ವಿಫಲವಾಗಿದ್ದು, ಜನತೆಯ ದೃಷ್ಟಿಯಲ್ಲಿ ಕಳಂಕಿತರಾಗಿದ್ದಾರೆ. ಆದರೆ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಬಂದ ನೆರೆಗೆ ಸರ್ಕಾರ ಸ್ಪಂದಿಸಿದ ರೀತಿಗೆ ಹಲವಾರು ಕೈಗಾರಿಕೋದ್ಯಮಿಗಳು, ಮಠಾಧೀಶರೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಜೆಟ್ ಪತ್ರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೂರು ಬಾರಿ ಪ್ರವಾಹದಿಂದ 56 ಸಾವಿರ ಕೋಟಿ ರೂ ಆದ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕೂಡ ರಾಜ್ಯಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಈ ಬಾರಿಯ ಗ್ರಾ.ಪಂ.ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಪ್ರವಾಹಪಿಡಿತರಾಗಿದ್ದರೂ ಕೂಡ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಸ್ಕರಿಸುವ ಬದಲು ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರರಿಗೂ ಅಭಿನಂದಿಸಿದರು.
ಮಧುಗಿರಿ ಜಿಲ್ಲೆಯಾಗಬೇಕೆಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ|| ಜಿ.ಪರಮೇಶ್ವರ್ ತುಮಕೂರು ಜಿಲ್ಲೆಯು 11 ಕ್ಷೇತ್ರವಿದ್ದು 10 ತಾಲ್ಲೂಕು ಇದೆ. ಬೆಳಗಾಂ ನಂತರ ತುಮಕೂರು ಜಿಲ್ಲೆ ಅತಿ ದೊಡ್ಡ ಜಿಲ್ಲೆಯಾಗಿದೆ. ಪಾವಗಡದಿಂದ ಜಿಲ್ಲಾ ಕೇಂದ್ರ ತಲುಪಲು ಬಹುದೂರವಾಗಿರುವುದರಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಮಧುಗಿರಿ ಉಪವಿಭಾಗ ಕೇಂದ್ರವಾಗಿದ್ದು, ಬರಪೀಡಿತ ಮತ್ತು ರಾಯಲ್‍ಸೀಮೆಗೆ ಸೇರಿರುವುದರಿಂದ ಹಾಗೂ ಮಳೆಯಾಶ್ರೀತ ಪ್ರದೇಶಯಾಗಿರುವುದರಿಂದ ಮಧುಗಿರಿ ಜಿಲ್ಲೆಯಾಗಲು ಸೂಕ್ತ ಕ್ಷೇತ್ರವಾಗಿದೆ. ನಾವಿದ್ದಾಗಲೇ ಶೈಕ್ಷಣಿಕ ಜಿಲ್ಲೆಯಾಗಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳ ಅಗತ್ಯತೆಯನ್ನು ಪೂರೈಸಿದ್ದೇವೆ. ಎಆರ್‍ಟಿಓ, ಸಾರಿಗೆ ಡಿಪೋ ಕೂಡ ಕ್ಷೇತ್ರದಲ್ಲಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಕೈಗಾರಿಕಾ ವಲಯ ಕೂಡ ಮಂಜೂರಾಗಿದೆ. ಆಡಳಿತ ಸುಧಾರಣೆಗಾಗಿ ಈಗಿನ ಬಿಜೆಪಿ ಸರ್ಕಾರಕ್ಕೆ ಅಂತಹ ಯಾವುದೇ ತೊಡಕಿಲ್ಲ. ಮಧುಗಿರಿಯನ್ನು ಜಿಲ್ಲೆ ಮಾಡಬಹುದಾಗಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ ಎಂದರು.
ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಪಟ್ಟಣದ ಶ್ರೀ ದಂಡಿನ ಮಾರಮ್ಮ ದೇಗುಲದ ಪ್ರಧಾನ ಅರ್ಚಕ ನಾಗಲಿಂಗಾಚಾರ್, ಮಾಜಿ ಪುರಸಭಾ ಉಪಾಧ್ಯಕ್ಷ ಎಂ.ಪಿ.ಗಣೇಶ್ ಮನೆಗಳಿಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು. ಮಾಜಿ ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣಶೆಟ್ಟಿ, ಗುತ್ತಿಗೆದಾರ ರಾಧೇಶ್ಯಾಮ್ ಮನೆಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ಸದಸ್ಯ ಚಂದ್ರಶೇಖರಬಾಬು, ಗಂಗರಾಜು, ನರಸಿಂಹಮೂರ್ತಿ, ಚಂದ್ರಶೇಖರ್, ಮಾಜಿ ಪೀಕಾರ್ಡ್ ಸದಸ್ಯ ಕೂರ್ಲಪ್ಪ, ಮುಖಂಡ ನಾರಾಯಣ್, ಗುತ್ತಿಗೆದಾರ ವೆಂಕಟಕೃಷ್ಣಾರೆಡ್ಡಿ, ಕಾರಮರಡಿ ಮಹೇಶ್, ಹಾಗೂ ಇತರೆ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಇತರರು ಇದ್ದರು.