ಹುಳಿಯಾರು : 

      ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನೆ, ಮನ ತಲುಪಲು ತರಹೇವಾರಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ. ಅದರಲ್ಲೂ ಈ ಬಾರಿ ತಮ್ಮ ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಸಂಪರ್ಕ ಸೇತುಗಳಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

      ಈ ಬಾರಿ ಚುನಾವಣೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದು, ಆನ್‍ಲೈನ್ ಪ್ರಚಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ಕರಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಮತ್ತು ಆತ್ಮೀಯರಿಗೆ ಟ್ಯಾಗ್ ಮಾಡಿ ಮತ ಕೇಳುತ್ತಿದ್ದಾರೆ. ಇನ್ನೂ ಕೆಲವರು ಕೈ ಮುಗಿದು ಮತ ಕೇಳುವ ವಿಡಿಯೋ ತುಣುಕುಗಳನ್ನು ಹಾಕಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

       ಕೆಲವರು ಕರಪತ್ರಗಳಷ್ಟೇ ಅಲ್ಲದೇ, ಸಿನಿಮಾ ಹಾಡುಗಳಿಗೆ ತಮ್ಮ ವಿಡಿಯೊಗಳನ್ನು ಮಿಕ್ಸ್ ಮಾಡಿ, ಪ್ರಚಾರ ನಡೆಯುತ್ತಿದ್ದಾರೆ. ಸ್ಟಾರ್ ನಟರ ಹಾಡುಗಳ ತುಣುಕುಗಳಿಗೆ ತಮ್ಮ ಪೋಟೊಗಳನ್ನು ಸೇರಿಸಿ ಕಿರು ವಿಡಿಯೊ ಮಾಡುವ ಮೂಲಕ ಆ ವಿಡಿಯೋಗಳನ್ನು ಫೇಸ್ ಬುಕ್, ವ್ಯಾಟ್ಸಾಪ್ ಗಳಲ್ಲಿ ಅಪ್ಲೋಡ್ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.

      ‘ನಿಮ್ಮ ಅಮೂಲ್ಯ ಮತ ಈ ಗುರುತಿಗೆ ಹಾಕಿ, ಸೇವೆಗೆ ಅವಕಾಶ ಮಾಡಿಕೊಡಿ’ ಎಂಬ ಒಕ್ಕಣೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ತುಣುಕುಗಳಲ್ಲಿದೆ. ಉದ್ಯೋಗ, ವ್ಯಾಪಾರ ಇತ್ಯಾದಿ ನಿಮಿತ್ತ ಪರ ಊರುಗಳಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರನ್ನು ತಲುಪಲು ಈ ಸಾಮಾಜಿಕ ಜಾಲತಾಣವನ್ನು ಅಭ್ಯರ್ಥಿಗಳು ವೇದಿಕೆಯಾಗಿಸಿಕೊಂಡಿದ್ದಾರೆ.

 

(Visited 86 times, 1 visits today)