ತುಮಕೂರು :
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‍ಮಸ್ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮ ಇಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಕ್ರಿಸ್‍ಮಸ್ ಎಂದಾಕ್ಷಣ ಕ್ರಿಸ್‍ಮಸ್ ಟ್ರೀ ಅಲಂಕಾರ, ಕ್ರಿಸ್ಮಸ್ ಕೇಕ್‍ಗಳು, ಸಂತಕ್ಲಾಸ್ ಕ್ಯಾಂಡಲ್‍ಗಳು, ವಿವಿಧ ಅಲಂಕಾರಗಳು ನೆನಪಿಗೆ ಬರುತ್ತವೆ. ಪಟಾಕಿ ಸಿಡಿಸುವುದು, ಗುಂಪು ಸೇರುವುದು, ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಂಭ್ರಮದ ಮನೆ ಮಾಡಿರಲಿಲ್ಲ.
ನಗರದ ಚರ್ಚ್ ಸರ್ಕಲ್‍ನಲ್ಲಿರುವ ಸಿಎಸ್‍ಐ ಮಹಾದೇವಾಲಯದಲ್ಲಿ ಸರಳವಾಗಿ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು.
ಸಿಎಸ್‍ಐ ವೆಸ್ಲಿ ಮಹಾದೇವಾಲಯದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯಕ್ಕೆ ಬಂದ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ಹಾಗೆಯೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗಿತ್ತು.
ಕ್ರೈಸ್ತ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಈ ಕೊರೊನಾ ಮಹಾಮಾರಿ ಜಗತ್ತಿನಿಂದ ಬಹುಬೇಗ ದೂರವಾಗಲಿ ಎಂದು ಏಸುಕ್ರಿಸ್ತನಲ್ಲಿ ಪ್ರಾರ್ಥಿಸಿದರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಬಳಿಕ ಹಬ್ಬದ ಸಂದೇಶ ನೀಡಿದ ಸಿಎಸ್‍ಐ ಮಹಾದೇವಾಲಯದ ಸಭಾ ಪಾಲಕರು ಹಾಗೂ ತುಮಕೂರು ಕ್ಷೇತ್ರದ ಅಧ್ಯಕ್ಷರಾದ ಮಾರ್ಗನ್ ಸಂದೇಶ್, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕ್ರಿಸ್‍ಮಸ್ ಹಬ್ಬವನ್ನು ಸಡಗರ ಸಂಭ್ರಮ ಇಲ್ಲದೆ ಸರ್ಕಾರದ ಕೋವಿಡ್ ಮಾರ್ಗಸೂಚಿಗಳು ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಈ ವರ್ಷ ಕೊರೊನಾ ವೈರಸ್ ಪರಿಣಾಮದಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿದೆ. ಹಾಗಾಗಿ ಈ ಬಾರಿಯ ಕ್ರಿಸ್‍ಮಸ್ ಹಬ್ಬದ ಆಚರಣೆಗಳಲ್ಲಿ ಸ್ವಲ್ಪ ಕಡಿಮೆ ಆಚರಣೆಗಳು ನಡೆಯುತ್ತಿವೆ. ಎಂದಿನಂತೆ ಅನೇಕ ಕಾರ್ಯಕ್ರಮಗಳ್ನು ಸಭೆಗಳಲ್ಲಿ ಮಾಡಲು ಸಾಧ್ಯವಾಗಿಲ್ಲ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿದ್ದಂತಹ ಸಾಮೂಹಿಕ ಕೊರೊನಾ ಹಿನ್ನೆಲೆಯಲ್ಲಿ ಮಾಡಲಾಗುತ್ತಿಲ್ಲ. ಹಾಗೆಯೇ ಆಟೋಟ ಸ್ಪರ್ಧೆಗಳನ್ನು ನಿಲ್ಲಿಸಲಾಗಿದೆ ಎಂದರು.
ಕ್ರಿಸ್‍ಮಸ್ ಹಬ್ಬ ಇಡೀ ಜಗತ್ತಿನಾದ್ಯಂತ ಸಂತೋಷ, ಸಡಗರ ತಂದಂತಹ ಹಬ್ಬ. ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ ಅದರದೇ ಆದಂತಹ ಹಿನ್ನೆಲೆ, ಮೌಲ್ಯಗಳನ್ನು ಹೊಂದಿದೆ. ಜನರ ಮೇಲಿನ ಪ್ರೀತಿ, ರಕ್ಷಣೆಗೋಸ್ಕರ ದೇವರು ಭೂಮಿಗೆ ಬಂದಂತಹ ಸಂಕೇತವನ್ನು ಈ ಹಬ್ಬ ಸೂಚಿಸುತ್ತದೆ ಎಂದರು.
ಪ್ರತಿ ವರ್ಷ ಈ ಹಬ್ಬ ಆಚರಿಸುವಾಗ ವಿವಿಧ ರೀತಿಯ ಕಾರ್ಯಗಳನ್ನು ಸಾಂಕೇತಿಕವಾಗಿ ಮಾಡುತ್ತಿದ್ದೆವು. ಕ್ರಿಸ್‍ಮಸ್ ಎಂದಾಕ್ಷಣ ಕ್ರಿಸ್‍ಮಸ್ ಟ್ರೀ ಅಲಂಕಾರ, ಕ್ರಿಸ್ಮಸ್ ಕೇಕ್‍ಗಳು, ಸಂತಕ್ಲಾಸ್ ಕ್ಯಾಂಡಲ್‍ಗಳು, ವಿವಿಧ ಅಲಂಕಾರಗಳು ನೆನಪಿಗೆ ಬರುತ್ತದೆ. ಪಟಾಕಿ ಸಿಡಿಸುವುದು, ಗುಂಪು, ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಭ್ರಮದ ಹಬ್ಬ ಇಲ್ಲ ಎಂದರು.
ಕ್ರಿಸ್‍ಮಸ್ ಸರಳ ಆಚರಣೆಗಷ್ಟೇ ಮಹತ್ವ ಕೊಡದೆ ಕ್ರಿಸ್‍ಮಸ್ ಹಬ್ಬದ ಉದ್ದೇಶ, ಹಿನ್ನೆಲೆಯನ್ನು ತಿಳಿದುಕೊಂಡು ಆರಾಧನೆ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜೇಂದ್ರಕುಮಾರ್, ಅನಿಲ್, ರಂಜನ್‍ಕುಮಾರಿ, ಮನೋಜ್ ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು.