ಹುಳಿಯಾರು :
ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಜೋರಾಗಿದ್ದು ದಿನದಿಂದ ದಿನಕ್ಕೆ ಅವಕ ಹೆಚ್ಚಾಗುತ್ತಿದೆ. ಸಮತೋಷಕರ ಸಂಗತಿಯೆಂದರೆ ಖುದ್ದು ರೈತರೇ ನಿತ್ಯ ತಾಜಾ ಕಾಯಿಗಳನ್ನು ತಂದು ಮಾರುತ್ತಿದ್ದಾರೆ.
ಹುಳಿಯಾರು ಸುತ್ತಮುತ್ತ ಸಾಂಪ್ರದಾಯಿಕ ರಾಗಿ ಹೊಲಗಳು ಹಾಗೂ ಪ್ರತ್ಯೇಕವಾಗಿ ಅವರೆ ಕಾಯಿ ಬೆಳೆಯಲಾಗಿದೆ. ಈಗ ಮೊದಲ ಬಿತ್ತನೆಯ ಫಸಲು ಮಾರಾಟಕ್ಕೆ ಬರುತ್ತಿದೆ. ಒಂದು ಕೆ.ಜಿ ಅವರೆ ಕಾಯಿಗೆ 35 ರೂನಂತೆ ಮಾರಾಟವಾಗುತ್ತಿದೆ. ಅವರೆ ಕಾಯಿ ಆವಕ ಈಗಷ್ಟೇ ಪ್ರಾರಂಭವಾಗಿದ್ದು ದಿನಕಳೆದಂತೆ ಅವಕ ಹೆಚ್ಚಾಗಿ ಬೆಲೆಯೂ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಬಾರಿ ಹದವಾಗಿ ಮಳೆಯಾದ ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಉತ್ತಮ ಇಳುವರಿ ಬಂದಿದೆ. ಹುಳಿಯಾರಿನ ಡೈಲಿ ಮಾರುಕಟ್ಟೆಗಿಂತ ಕರವೇ ಸರ್ಕಲ್ನಲ್ಲಿ ಸ್ಥಳೀಯ ರೈತರ ಸೊಗಡು ಅವರೆಕಾಯಿ ಮಾರಾಟಕ್ಕೆ ತರುತ್ತಿದ್ದಾರೆ. ನಿತ್ಯ ಹತ್ತನ್ನೆರಡು ರೈತರು ರಾಶಿ ಹಾಕಿ ಮಾರುತ್ತಿದ್ದು ಅವರೆಕಾಯಿಯ ಸೊಗಡಿನ ಘಮಲು ದಾರಿಹೋಕರನ್ನು ಸೆಳೆಯುತ್ತಿದೆ.
ತಾಲ್ಲೂಕಿನಲ್ಲಿ ಅವರೆ ಬೆಳೆ ಹೂವು, ಪಿಂದೆ ಹಾಗೂ ಕಾಯಿ ಹಂತದಲ್ಲಿದೆ. ಮೊದಲ ಬಿತ್ತನೆಯ ಕಾಯಿ ಈಗ ಮಾರುಕಟ್ಟೆಗೆ ಬರುತ್ತಿದೆ. ಪೂರ್ಣ ಪ್ರಮಾಣದಲ್ಲಿ ಬರಬೇಕಾದರೆ ಇನ್ನೂ ಎರಡು ವಾರ ಕಳೆಯಬೇಕಾಗಿದೆ. ಅಲ್ಲದೆ ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಇನ್ನೂ ಮೂರ್ನಾಲ್ಕು ತಿಂಗಳು ತಾಜಾ ಅವರೆಕಾಯಿ ಸಿಗುವ ಸಾಧ್ಯತೆ ಇದೆ.
ಒಟ್ಟಾರೆ ಇಲ್ಲಿನ ಕರವೇ ಸರ್ಕಲ್ ನಿತ್ಯ ಅವರೆಕಾಯಿ ಸುಗ್ಗಿ ನಡೆಯುತ್ತಿದೆ. ಬೆಳಗ್ಗೆ 8 ರಿಂದ ಸಂಜೆ 6 ರ ತನಕ ಅವರೆಕಾಯಿ ಮಾರಾಟ ಮತ್ತು ಖರೀದಿ ಭರಾಜೆ ಜೋರಾಗಿದೆ. ರೈತರು ಎಷ್ಟೇ ಮೂಟೆ ಅವರೆಕಾಯಿ ತಂದರೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ.