ತುಮಕೂರು :
ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಇಂದು ಸಂಬಂಧಿಸಿದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಮತ ಎಣಿಕೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳು, ಗುಬ್ಬಿ-34, ಕುಣಿಗಲ್-36, ತಿಪಟೂರು-25, ತುರುವೇಕೆರೆ-27, ಚಿಕ್ಕನಾಯಕನಹಳ್ಳಿ-27, ಮಧುಗಿರಿ-39, ಶಿರಾ-41, ಕೊರಟಗೆರೆ-24 ಹಾಗೂ ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿಗಳ 2661 ಕ್ಷೇತ್ರಗಳ ಮತ ಎಣಿಕೆಯು 167 ಕೊಠಡಿಗಳಲ್ಲಿ 762 ಟೇಬಲ್‍ಗಳಲ್ಲಿ ನಡೆಯಲಿದೆ. ಮತ ಎಣಿಕೆಗಾಗಿ 817 ಮಂದಿ ಎಣಿಕೆ ಮೇಲ್ವಿಚಾರಕರು, 1624 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಮತ ಎಣಿಕೆಯು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ತುಮಕೂರು ತಾಲ್ಲೂಕು-ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತುಮಕೂರು, ಗುಬ್ಬಿ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ, ತಿಪಟೂರು-ಪಲ್ಲಗಟ್ಟಿ ಅಡವಪ್ಪ ಕಾಲೇಜು, ತುರುವೇಕೆರೆ-ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಕ್ಕನಾಯಕನಹಳ್ಳಿ-ಸರ್ಕಾರಿ ಪದವಿ ಪೂರ್ವ ಕಾಲೇಜು, ಮಧುಗಿರಿ-ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್-ಮಹಾತ್ಮಾಗಾಂಧಿ ಕಾಲೇಜು, ಶಿರಾ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ-ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾವಗಡ-ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮತ ಎಣಿಕೆ ಕೇಂದ್ರಗಳಲ್ಲಿ ನಡೆಯಲಿದೆ.
ಮತ ಎಣಿಕಾ ಕೇಂದ್ರದ ಸುತ್ತ ನಿಷೇಧಾಜ್ಞೆ :-
ಮತ ಎಣಿಕೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ಡಿಸೆಂಬರ್ 30ರ ಬೆಳಿಗ್ಗೆ 6 ರಿಂದ ಡಿಸೆಂಬರ್ 31ರ ಬೆಳಿಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಐದು ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಘೋಷಣೆ ಕೂಗುವುದು ಹಾಗೂ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡತಕ್ಕದ್ದಲ್ಲ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು, ಸಾರ್ವಜನಿಕ ಪ್ರಾಣ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಶವಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಮೊಬೈಲ್‍ಗಳು, ಬ್ಲೇಡ್/ಚಾಕು ಇತ್ಯಾದಿ ಆಯುಧಗಳು, ಪಟಾಕಿ/ಸ್ಪೋಟಕ ವಸ್ತುಗಳು, ಸಿಗರೇಟ್/ಬೀಡಿ, ಬೆಂಕಿ ಪೊಟ್ಟಣ, ಕ್ಯಾಂಡಲ್‍ಗಳು, ನೀರು, ನೀರಿನ ಬಾಟಲ್, ಇಂಕ್‍ಪೆನ್, ಜೆಲ್‍ಪೆನ್, ಇಂಕ್‍ಪ್ಯಾಡ್, ಆಹಾರ ಪದಾರ್ಥಗಳು, ಹಣ್ಣು ಹಂಪಲುಗಳು, ತರಕಾರಿ ಇತ್ಯಾದಿ ಮತ ಎಣಿಕೆ ಕಾರ್ಯಕ್ಕೆ ಅಡಚಣೆ ಉಂಟು ಮಾಡುವ ಯಾವುದೇ ರೀತಿಯ ಸಾಮಗ್ರಿಗಳನ್ನು ಮತ ಎಣಿಕೆ ಕಟ್ಟಡ/ಕೇಂದ್ರದ ಒಳಗೆ ತರುವುದನ್ನು ನಿಷೇಧಿಸಲಾಗಿದೆ.
ಅಭ್ಯರ್ಥಿಗಳು/ಮತ ಎಣಿಕೆ ಏಜೆಂಟರುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರತಕ್ಕದ್ದು. ಅವರ ಕ್ಷೇತ್ರಕ್ಕೆ ಮೀಸಲಾದ ಕೊಠಡಿ/ ಎಣಿಕೆ ಟೇಬಲ್‍ಗಳಲ್ಲಿ ಮಾತ್ರ ಉಪಸ್ಥಿತರಿರುವುದು. ಅನಗತ್ಯ ತಿರುಗಾಟಕ್ಕೆ ಅವಕಾಶವಿರುವುದಿಲ್ಲ.