ಗುಬ್ಬಿ: 

      ಹೆಚ್ಚಿದ ಅಪರಾಧ ಕೃತ್ಯದಿಂದ ಗುಬ್ಬಿ ನಾಗರೀಕರಲ್ಲಿ ಆತಂಕ ಮನೆ ಮಾಡಿದೆ. ಸರಗಳ್ಳರ ಹಾವಳಿ ಜತೆಗೆ ಈಚೆಗೆ ಪುಂಡರ ಹಾವಳಿ ಹೆಚ್ಚಾಗಿ ಪಟ್ಟಣದ ಹಾಡುಹಗಲೇ ಗುಂಪು ಕಟ್ಟಿಕೊಂಡು ಯುವಕನೊರ್ವನ ಮೇಲೆ ಹಲ್ಲೆ ಜತೆಗೆ ಜಾತ್ರೆಗೆ ಸಂಬಂಧಿಸಿದ ಹಣ ದರೋಡೆ ಯತ್ನ ನಡೆದಿರುವುದು ಭಯವನ್ನುಂಟು ಮಾಡಿದೆ.

      ಕಳೆದೊಂದು ವಾರದಲ್ಲಿ ಅಪರಾಧ ಕೃತ್ಯಗಳು ಸಾಲು ಸಾಲಾಗಿ ನಡೆದಿವೆ. ಸರಗಳ್ಳರು ಮತ್ತೊಮ್ಮೆ ತಮ್ಮ ಕೈಚಳಕ ತೋರಿದ್ದಾರೆ. ಈಚೆಗೆ ಸೈಲೆಂಟ್ ಆಗಿದ್ದ ಪಟ್ಟಣದಲ್ಲಿ ಸರಗಳ್ಳರು ಸೋಮವಾರದಂದೇ ಗುರಿಯಾಗಿಸಿಕೊಂಡು ಆಗಮಿಸುತ್ತಿರುವುದು ವಿಪರ್ಯಾಸವಾಗಿದೆ. ಸಂತೇ ದಿನದ ಸಂಜೆ ವೇಳೆ ಹೊಸಬಡಾವಣೆಗಳನ್ನೇ ಆಯ್ಕೆ ಮಾಡಿಕೊಂಡು ಪಟ್ಟಣದ ಕೊನೆಯ ರಸ್ತೆಗಳಲ್ಲಿ ಒಂಟಿ ಮಹಿಳೆಯರ ಬರುವಿಕೆಗೆ ಕಾದು ಸರಗಳಿಗೆ ಕೈ ಹಾಕುತ್ತಿದ್ದಾರೆ. ವಿನಾಯಕ ಬಡಾವಣೆ ಮತ್ತು ಮಾರುತಿನಗರ ಶುಭೋದಯ ಶಾಲೆಯ ಸಮೀಪದಲ್ಲಿ ಎರಡು ಪ್ರಕರಣ ಒಂದೇ ದಿನ ನಡೆದಿದೆ.

      ಈ ಹಿಂದೆ ಸರದಿ ಕಳ್ಳತನ, ಸರಗಳ್ಳತನ ನಾಗರೀಕರನ್ನು ಬೆಚ್ಚಿಬೇಳಿಸಿತ್ತು. ಕೊರೋನಾ ಸಮಯದಲ್ಲಿ ಶಾಂತಿ ವಾತವರಣ ಸೃಷ್ಟಿಯಾಗಿತ್ತು. ನಂತರದಲ್ಲಿ ಮತ್ತೊಮ್ಮೆ ತಮ್ಮ ಅಪರಾಧ ಕೃತ್ಯಕ್ಕೆ ಗುಬ್ಬಿ ಪಟ್ಟಣದ ನಿರ್ಜನ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಿಸಿ ಕೆಮರಾಗಳು ಲೆಕ್ಕಕ್ಕಿದ್ದರೂ ಕೆಲಸ ಮಾಡದ ದುಸ್ಥಿತಿಯಲ್ಲಿವೆ. ಪೊಲೀಸರೇ ಅಳವಡಿಸಿದ ಕೆಮರಾಗಳು ಈಗ ಚಾಲ್ತಿಯಲ್ಲಿಲ್ಲ. ಎಲ್ಲವೂ ದುರಸ್ಥಿಗೆ ಬಂದಿವೆ. ನಿರ್ಜನ ಸ್ಥಳಗಳ ಆಯ್ಕೆ ಮಾಡುವ ಕಳ್ಳರು ಕ್ಷಣಾರ್ಧದಲ್ಲಿ ಮಾಯವಾಗುವ ಮಾರ್ಗಗಳನ್ನು ಕಂಡುಕೊಂಡಂತಿದೆ. ಸಾರ್ವಜನಿಕರಿಗೆ ವಿಷಯ ಮುಟ್ಟುವ ವೇಳೆಗೆ ಪಟ್ಟಣದಿಂದ ಹೊರ ಹೋಗುವ ತಂತ್ರಗಾರಿಕೆ ತಿಳಿದ ಸರಗಳ್ಳರನ್ನು ಮಟ್ಟ ಹಾಕುವ ಮರುತಂತ್ರ ಪೊಲೀಸ್ ಇಲಾಖೆ ಮಾಡಬೇಕಿದೆ.

      ಈ ಸರಗಳ್ಳತನ ಪ್ರಕರಣ ಸಾರ್ವಜನಿಕರ ನಡುವೆ ಚರ್ಚೆಗೆ ಗ್ರಾಸವಾಗಿ ವಾರದೊಳಗೆ ಪಟ್ಟಣದ ಬ್ಯಾಂಕ್ ಒಂದರ ಬಳಿ ಗುಂಪು ಕಟ್ಟಿಕೊಂಡ ಪುಂಡರು ಒರ್ವ ಯುವಕನನ್ನು ಸಾರ್ವಜನಿಕರ ಕಣ್ಣೆದುರೇ ಹಲ್ಲೆ ನಡೆಸಿರುವುದು ನಾಗರೀಕರಲ್ಲಿ ತಲ್ಲಣ ಉಂಟು ಮಾಡಿದೆ. ಜಾತ್ರಾ ಮಹೋತ್ಸವಕ್ಕೆ ತಲುಪಬೇಕಿದ್ದ ಹಣದ ಹುಂಡಿಯನ್ನು ಒಡೆದು ದೋಚುವ ಯತ್ನ ಹೊಸಹಳ್ಳಿ ಕ್ರಾಸ್ ಬಳಿ ನಡೆದಿದ್ದು, ದರೋಡೆ ಯತ್ನದ ಬಗ್ಗೆ ಪೊಲೀಸರು ನಮಗೆ ತಿಳಿದಿಲ್ಲ. ಯಾವುದೇ ಘಟನೆ ನಡೆದಿಲ್ಲ ಎಂಬ ಉತ್ತರ ನೀಡಿದ್ದಾರೆ. ಆದರೆ ಸಾರ್ವಜನಿಕ ಚರ್ಚೆಗೆ ಈ ಪ್ರಕರಣ ಕಾರಣವಾಗಿದ್ದರೂ ಪೊಲೀಸರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ನೀಡುತ್ತಿರುವುದು ಸಂಶಯಕ್ಕೀಡು ಮಾಡಿದೆ.

       ಒಟ್ಟಾರೆ ಕೊರೋನಾ ಭೀತಿಯಿಂದ ಹೊರಬಂದ ಜನರಿಗೆ ಅಪರಾಧ ಕೃತ್ಯಗಳು ಮತ್ತೊಂದು ರೀತಿ ಭೀತಿ ಹುಟ್ಟಿಸಿದೆ. ಈ ಬಗ್ಗೆ ಕ್ರಮವಹಿಸಬೇಕಾದ ಪೊಲೀಸ್ ಇಲಾಖೆ ಸಾರ್ವಜನಿಕರ ನೆಮ್ಮದಿ ಕಾಪಾಡಿ ಆರೋಪಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕಿದೆ. ಪೊಲೀಸ್ ವೈಪಲ್ಯ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಕಂಡು ಬರುತ್ತಿದೆ. ಇಲಾಖೆ ಎಚ್ಚೆತ್ತು ಕಾನೂನು ಕ್ರಮ ಕೈಗೊಂಡು ಜನರ ನೆಮ್ಮದಿಗೆ ನಾಂದಿ ಹಾಡಬೇಕಿದೆ.

(Visited 9 times, 1 visits today)