ಮಧುಗಿರಿ :

      ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ ಮಗು ಎಂದು ಹಸುಳೆ ದ್ರುವನಿಗೆ ನಾರದ ಮಹರ್ಷಿ ಹೇಳಿದಂತೆ ಮಹಿಳೆಯೊಬ್ಬರು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ರಾಜ್ಯ ಸರಕಾರದ ಒಂದು ನೌಕರಿ ಮತ್ತು ನಾಲ್ಕು ಅಧಿಕಾರಿ ಸ್ಥಾನವನ್ನು ಗಿಟ್ಟಿಸಿರುವ ಗ್ರಾಮೀಣ ಬಹುಮುಖ ಪತ್ರಿಭೆ ಮಧುಗಿರಿ ತಾಲೂಕಿನ ತವಕದಹಳ್ಳಿ ಗ್ರಾಮದವರಾಗಿದ್ದಾರೆ.

      ತವಕದಹಳ್ಳಿ ಗ್ರಾಮದ ಟಿ.ರಮ್ಯ ಈ ಸಾಧನೆ ಮಾಡಿರುವ ಸಾಧಕಿಯಾಗಿದ್ದು ಈಕೆ ಪ್ರಾಥಮಿಕ ಶಿಕ್ಷಣವನ್ನು ತವಕದಹಳ್ಳಿ ಗ್ರಾಮದಲ್ಲಿ, ಬಿಜವರ ಗ್ರಾಮದಲ್ಲಿ ಪ್ರೌಢಶಿಕ್ಷಣವನ್ನು ತುಮಕೂರಿನಲ್ಲಿ ಪಿಯುಸಿ ಮತ್ತು ಡಿಇಡಿ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು.
ಡಿಇಡಿ ಅಂತಿಮ ಹಂತದಲ್ಲಿದ್ದಾಗ 2006 ರಲ್ಲಿ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗೆ ಅರ್ಜಿಸಲ್ಲಿಸಿ, 2007 ರಲ್ಲಿ ಪೊಲೀಸ್ ಇಲಾಖೆಗೆ ನೇಮಕವಾದ ನಂತರ ಡಿಇಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಆಗ ಅವರು 19 ವರ್ಷ ಪೂರೈಸಿದ್ದರು. ಧಾರವಾಡದಲ್ಲಿ ತರಬೇತಿಯಲ್ಲಿದ್ದಾಗಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿಎ ಪದವಿ ಪಡೆದರು.

      ಅದಾದನಂತರ ದೂರಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿ ಪಡೆದರು. ಈ ಎಲ್ಲಾ ಪದವಿಯನ್ನು ಪೊಲೀಸ್ ಪೇದೆಯಾಗಿಯೇ ಪಡೆದರು. ಕೆಎಎಸ್ ಕೋಚಿಂಗ್ ಕ್ಲಾಸ್‍ಗೆ ಸೇರಿ 2011 ರಲ್ಲಿ ಪ್ರಿಲಿಮ್ಸ್ ಪಡೆದು ಪಾಸಾದರು. ಮುಖ್ಯ ಪರೀಕ್ಷೆಗೆ ಪುನಃ ತರಬೇತಿ ಪಡೆಯುತ್ತಿದ್ದಾಗ ಈ ಮಧ್ಯೆ ಪಿಎಸ್‍ಐ ಪರೀಕ್ಷೆಯನ್ನು ಸಹ ಪಡೆದು ಆಯ್ಕೆಯಾಗಿದ್ದರು. 2011ರಲ್ಲಿ ತಹಶೀಲ್ದಾರ್‍ರಾಗಿ ಆಯ್ಕೆಯಾದರೂ ಕೂಡ ಆದೇಶ ದೊರೆಯಲಿಲ್ಲ. 2015ರಲ್ಲಿ ಕೆಎಸ್‍ಐಎಸ್‍ಎಪ್ ಸಬ್‍ಇನ್ಸ್‍ಪೆಕ್ಟರ್ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದರು. ಇದಕ್ಕಾಗಿ ಹೈದರಬಾದ್‍ನಲ್ಲಿ ಒಂದು ವರ್ಷ ತರಬೇತಿ ಪಡೆಯುತ್ತಿದ್ದ ವೇಳೆ ಅಬಕಾರಿ ಸಬ್‍ಇನ್ಸ್‍ಪೆಕ್ಟರ್ ಪರೀಕ್ಷೆ ಬರೆದು ಆಯ್ಕೆಯಾದರು. 2017 ರಲ್ಲಿ ಎಸಿಸಿಟಿ ಆಗಿ ಆಯ್ಕೆಯಾದರು.

ಅಜ್ಜಿಯ ಗ್ರಾಮವೇ ಈ ಎಲ್ಲಾ ಸಾಧನೆಗೆ ಕಾರಣ : 

      ಪಿಯುಸಿ ವ್ಯಾಸಂಗಕ್ಕಾಗಿ ಅಜ್ಜಿಯ ಊರು ಸೇರಿದರು ಈ ಊರು ತುಮಕೂರು ಸಮೀಪದ ಮೆಳೆಹಳ್ಳಿ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ನೌಕರರು ಅಧಿಕ ಪ್ರಮಾಣದಲ್ಲಿದ್ದಾರೆ. ಇದರಿಂದಾಗಿ ಸರಕಾರಿ ಉದ್ಯೋಗಿಯಾಗಲೇಬೇಕೆಂಬ ಛಲ ಮನದಲ್ಲಿ ಬೇರೂರಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು.

ಪರೀಕ್ಷಾರ್ಥಿಗಳಿಗೆ ಸಂದೇಶ :

      ಸ್ಪಷ್ಟ ಗುರಿ, ಸಾಧಿಸುವ ಛಲ ಸಾಧನೆಗೆ ಊರುಗೋಲಾಗಿದ್ದು ದೃಡನಿರ್ಧಾರ ಪರೀಕ್ಷಾರ್ಥಿಗಳಿಗೆ ಅಗತ್ಯ ಎಡವಿದಾಗ ಕೈ ಚೆಲ್ಲದೆ ಮರಳಿ ಯತ್ನ ಮಾಡಬೇಕು. ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ತಿದ್ದುಕೊಳ್ಳಬೇಕು ಕಾಟಚಾರಕ್ಕೆ ಪರೀಕ್ಷೆಗಳನ್ನು ಬರೆಯದೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅದಮ್ಯ ಬಯಕೆಯೊಂದಿಗೆ ಪರೀಕ್ಷೆಗಾಗಿ ಸಿದ್ದರಾಗಿ. ಸೋಲುಗಳಿಗೆ ಮುನ್ನುಗ್ಗಬೇಕೆಂದು ಪರೀಕ್ಷಾರ್ಥಿಗಳಿಗೆ ಟಿ.ರಮ್ಯರವರು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
 

(Visited 261 times, 1 visits today)