ಮಧುಗಿರಿ:
ಈ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33 ಗ್ರಾ.ಪಂ ಗಳಲ್ಲಿ 30 ಗ್ರಾ.ಪಂ ಗಳು ಕೈ ವಶವಾಗಿವೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣದ ಅವರ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು ಕ್ಷೇತ್ರದ 525 ಗ್ರಾ.ಪಂ ಸದಸ್ಯರಲ್ಲಿ 363 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ತಾಲೂಕಿನ 615 ಸದಸ್ಯರ ಪೈಕಿ 423 ಸದಸ್ಯರು ಕಾಂಗ್ರೆಸ್ ನವರು ಆಯ್ಕೆಯಾಗಿದ್ದಾರೆ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಸದಸ್ಯ ಆಯ್ಕೆಯಾಗುವ ಮೂಲಕ ತಾಲೂಕಿನ ಮತದಾರರು ಬಿಜೆಪಿಗೆ ನೆಲೆಯಿಲ್ಲವೆಂದು ಸಾಬೀತು ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯುವಕ-ಯುವತಿಯರು, ಪದವೀಧರರು ಹೆಚ್ಚು ಆಯ್ಕೆಯಾಗಿರುವುದು ಸಂತಸ ತಂದಿದೆ. ಕೋವಿಡ್-19 ನಿಯಮಗಳು ಸಡಿಲಗೊಂಡ ನಂತರ ಕಾಂಗ್ರೆಸ್ ಬೆಂಬಲಿತ ಗೆದ್ದವರನ್ನೂ-ಸೋತವರನ್ನೂ ಒಂದೇ ವೇದಿಕೆಯಲ್ಲಿ 10 ಸಾವಿರ ಕಾರ್ಯಕರ್ತರ ಸಮ್ಮುಖದಲ್ಲಿ ಅಭಿನಂದಿಸಲಾಗುವುದು. ಈ ಕಾರ್ಯಕ್ರಮಕ್ಕೆ ಜಿಲ್ಲಾ ನಾಯಕರ ಜೊತೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗುವುದು ಎಂದರು.
ನೇರಳೇಕೆರೆ, ಚಿಕ್ಕಮಾಲೂರು ಗ್ರಾ.ಪಂಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಸದಸ್ಯರೂ ಕಾಂಗ್ರೆಸ್ ಬೆಂಬಲಿತರಾಗಿದ್ದು, ಇಲ್ಲಿ ಜೆಡಿಎಸ್ ನೆಲೆ ಕಳೆದು ಕೊಂಡಿದ್ದು, ಮುಂದಿನ ಅಸೆಂಬ್ಲಿ ಚುನಾವಣೆಗೆ ಮನಗೆ ಶುಭ ಸೂಚನೆ ಸಿಕ್ಕಿದೆ. ಜಿ.ಪಂ ತಾ.ಪಂ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಕೋರ್ ಕಮಿಟಿ ರಚಿಸಿ ಆಯ್ಕೆ ಮಾಡಲಾಗುವುದು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸದೇ 20 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಘೋಷಿಸಿದ್ದು, ಕನ್ನಡಿಯೊಳಗಿನ ಗಂಟಾಗಿದೆ. ಮಾಧ್ಯಮಗಳ ಮೂಲಕ ಪ್ರಚಾರ ಪಡೆದುಕೊಂಡು ಜನರನ್ನು ದಿಕ್ಕು ತಪ್ಪಿಸಿದರೇ ಹೊರತು ಇಲ್ಲಿಯವರೆಗೂ 20 ರೂಗಳೂ ಸಹ ಬಂದಿಲ್ಲ. 1964 ರಲ್ಲೇ ಜಾರಿಯಾಗಿದ್ದ ಗೋಹತ್ಯೆ ಮಸೂದೆಯನ್ನು ಜಾರಿಗೊಳಿಸಿದ್ದರೆ ಸಾಕಾಗಿತ್ತು. ಈಗ ಜಾರಿಗೊಳಿಸಿರುವ ಮಸೂದೆಯಿಂದ ಗ್ರಾಮಾಂತರ ಪ್ರದೇಶದ ರೈತರಿಗೆ ಬಹಳಷ್ಟು ಅನಾನುಕೂಲವಾಗಿದೆ. ಬೆಜೆಪಿಯ ತೀರ್ಮಾನಗಳು ಜನಪರವಾಗಿಲ್ಲ ಹಿಂದುತ್ವದಡಿ ಹೇಳಿಕೆ ನೀಡಿ ಮತಗಳಿಸುವ ತಂತ್ರವಾಗಿದೆ ಎಂದು ಜರಿದರು.
ಮಲತಾಯಿ ದೋರಣೆ:
ತಾಲೂಕಿನ ಅಭಿವೃದ್ದಿ ಕುಂಠಿತಗೊಂಡಿರುವ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ. ರಾಜ್ಯ ಸರ್ಕಾರ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುಧಾನ ಮಂಜೂರು ಮಾಡುವಲ್ಲಿ ಮಲತಾಯಿ ದೋರಣೆ ಅನುಸರಿಸುತ್ತಿದೆ. ಹಾಗಾಗಿ ತಾಲೂಕಿನ ಅಭಿವೃದ್ದಿಯಲ್ಲಿ ಕುಂಠಿತವಾಗಿರಬಹುದು ಇದರ ಬಗ್ಗೆ ವಿರೋಧ ಪಕ್ಷಗಳು ಒಗ್ಗೂಡಿ ಸದಸನ ಒಳಗೂ ಹೊರಗೂ ಹೋರಾಟ ನಡೆಸಬೇಕು ಎಂದರು.
ದ್ವಿಮುಖ ನೀತಿ:
ಮಾಜಿ ಪ್ರಧಾನಿ ದೇವೇಗೌಡರ ದ್ವಿಪಾತ್ರಾಭಿನಯ ನಿರೀಕ್ಷಿಸಿರಲಿಲ್ಲ. ಯಾವುಗಲೂ ಸ್ಪಷ್ಟ ಹೇಳಿಕೆ ನೀಡುತ್ತಿದ್ದ ಅವರು ಈಗ ದ್ವಿಮುಖ ನೀಓತಿ ಅನುಸರಿಸುತ್ತಿದ್ದಾರೆ. ಸದಸದ ಒಳಗೆ ಜೆಡಿಎಸ್ ನವರಿಂದ ಮಸೂದೆಗಳನ್ನು ಬೆಂಬಲಿಸಿ ಹೊರಗಡೆ ವಿರೋಧಿಸುವುದು ಸರಿಯೇ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ. ಪುರಸಭಾಧ್ಯಕ್ಷ ತಿಮ್ಮರಾಜು, ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ. ರಾಜು, ಪುರಸಭೆ ಸದಸ್ಯರಾದ ಲಾಲಾಪೇಟೆ ಮುಂಜುನಾಥ್, ಮಂಜುನಾಥ್ ಆಚಾರ್ ಇತರರಿದ್ದರು.