ತುಮಕೂರು :
ಅನಕ್ಷರಸ್ಥರ ವಿಶ್ವವಿದ್ಯಾಲಯದಂತಿರುವ ರಂಗಭೂಮಿ ಕಲೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಕರ್ನಾಟಕ ನಾಟಕ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಬಹುದೊಡ್ಡ ಮಾಧ್ಯಮವಾಗಿದ್ದು, ಬದುಕಿಗೆ ಶಿಕ್ಷಣ ಕೊಡುವಲ್ಲಿ ಮತ್ತು ಜೀವನವನ್ನು ವಿಕಾಸಗೊಳಿಸುವಲ್ಲಿ ಬಹಳ ಮಹತ್ತರ ಪಡೆದಿದೆ ಎಂದರು.
ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಳ್ಳಬಾರದು, ಪ್ರಶ್ತಿಗಳೇ ನಮ್ಮ ಬಳಿಗೆ ಹುಡುಕಿಕೊಂಡು ಬಂದಾಗ ಆ ಪ್ರಶಸ್ತಿಯ ಗೌರವ ಹೆಚ್ವುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ನಾಟಕ ಅಕಾಡೆಮಿ ಮತ್ತು ಸರಕಾರ ಹೆಚ್ಚು ಒತ್ತು ನೀಡಿ, ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು. ಕಲಾವಿದರ ಮಾಸಾಶನ ಹೆಚ್ಚಿಸಬೇಕು ಎಂದರು.
ಸಂಸದರಾದ ಜಿ.ಎಸ್. ಬಸವರಾಜು ಮಾತನಾಡಿ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರಕಾರದ ಪಾತ್ರ ಗುರುತರವಾಗಿದೆ. ಕಲೆ- ಸಂಸ್ಕೃತಿಗಳನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧವಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯೂ ಒಂದಾಗಿದೆ ಎಂದು ನುಡಿದರು.
ಹಿಮಾಲಯದಷ್ಟು ಸಾಧನೆ ಮಾಡಿದ ನಾಟಕಕಾರರು ನಾಡಿನಲ್ಲಿದ್ದು, ಅಕಾಡೆಮಿ ಉದ್ದೇಶಗಳು ನಾಡಿನೆಲ್ಲೆಡೆ ವಿಜೃಂಭಿಸಬೇಕು ಎಂದ ಅವರು, ಪ್ರಶಸ್ತಿ ಪ್ರದಾನದಿಂದ ಪ್ರಸಸ್ತಿಗೆ ಭಾಜನರಾದವರ ಸೇವೆ ಪರಿಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕಲಾವಿದರು ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿ, ನಾಡಿನ ಸಾಹಿತ್ಯಿಕ ಕಲೆ ವಿಶ್ವದಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ||ಭೀಮಸೇನ್ ಆರ್. ಮಾತನಾಡಿ, ಸರ್ಕಾರ ಕಲಾವಿದರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಕಾಲ ಕಾಲಕ್ಕೆ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ. ಆದರೆ, ಸರ್ಕಾರ ಕಲಾವಿದರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕಲಾವಿದರು ಸಮಾಜದಿಂದ ಉದ್ಭವಿಸುತ್ತಾರೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ.ವಿ. ರಾಜಾರಾಂ ಮಾತನಾಡಿ, ನಾಟಕ ಅಕಾಡಮಿ ಈವರೆಗೆ 1750 ರಿಂದ 1800 ಪ್ರಶಸ್ತಿ ಕೊಟ್ಟು ಕಲಾವಿದರನ್ನು ಗೌರವಿಸುವ ಮೂಲಕ ಬಹಳ ದೊಡ್ಡ ಕೆಲಸ ಮಾಡಿದೆ. ಗುಬ್ಬಿ ವೀರಣ್ಣ ಅವರ ರಂಗಭೂಮಿಯಿಂದಾಗಿ ನಾಡಿನ ಹಿರಿಮೆ ಜಗದಗಲ ಪಸರಿಸಿದ್ದು, ಗುಬ್ಬಿ ಕಂಪನಿ ಅನೇಕ ಜನರಿಗೆ ವಿಶ್ವವಿದ್ಯಾನಿಲಯವಾಗಿದೆ. ಟಿವಿ, ಮಾಧ್ಯಮಗಳಿಲ್ಲದಿದ್ದ ಕಾಲದಲ್ಲೂ ಈ ವಿಶ್ವವಿದ್ಯಾನಿಲಯದಿಂದ ಕರ್ನಾಟಕದ ಪರಂಪರೆ ಸಾಕಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು.
ಕೋವಿಡ್-19 ಸಂಕಷ್ಟದ ಹಾದಿ ಹಿಡಿದಿದ್ದ ರಂಗಭೂಮಿ ಕೊಂಚ ಬೆಳಕು ಕಂಡಿದ್ದು, ನಾಡಿನ ಶ್ರೀಮಂತಿಕೆ ಉಳಿಸಿ ಬೆಳೆಸುವ ಕಲಾವಿದರನ್ನು ಹೆಚ್ಚು ಹೆಚ್ಚು ಗೌರವಿಸುವಂತಾಗಬೇಕು ಎಂದು ನುಡಿದರು.
ಮಹಾನಗರ ಪಾಲಿಕೆ ಮಹಾಪೌರ ಫರೀಧಾ ಬೇಗಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲಾವಂತಿಕೆ ಮಾಯವಾಗುತ್ತಿದ್ದು, ಕಲೆಯನ್ನು ಬೆಳೆಸುವ ಕೆಲಸವಾಗಬೇಕು. ನಾಡನ್ನು ಶ್ರೀಮಂತಗೊಳಿಸುತ್ತಿರುವ ಕಲಾವಿದರ ಸೇವೆ ಮರೆಯಬಾರದು. ಅವರ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಜಿ.ವಿ. ಶಾರದ ಅವರಿಗೆ ಪ್ರದಾನ ಮಾಡಲಾಯಿತು. ಉಳಿದಂತೆ ವಾರ್ಷಿಕ ಪ್ರಶಸ್ತಿಯನ್ನು ನಾಗೇಂದ್ರ ಶಾ, ಕೆ.ಪಿ. ಪ್ರಕಾಶ್, ಡಾ.ಎಂ. ಬೈರೇಗೌಡ, ಮಂಜುಳ ಮಂಜುನಾಥ್, ಮಾಲೂರು ಸಿದ್ದಪ್ಪ, ಕೆ.ಜಂಬುನಾಥ, ಸಿದ್ದಲಿಂಗಪ್ಪ, ಭಾಸ್ಕರ್ ಮಣಿಪಾಲ, ಪ್ರೊ.ಎಂ.ಎಸ್. ವೇಣುಗೋಪಾಲ್, ಬಿ.ನಾಗರಾಗೌಡ, ಪಿ.ಶಾಡ್ರಾಕ್, ವಿಯಯ್ ಕುಮಾರ್ ಕೊಡಿಯಾಲ್ ಬೈಲು, ಪರಮೇಶ್ವರ ಲೆಂಡೆ, ಗುರುನಾಥಪ್ಪ ಉಂಗುರಶೆಟ್ಟಿ ಕೋಟೆ, ರಮೇಶ್ ಹಂಚಿನಮನಿ, ಬಸವರಾಜ ಹೆಸರೂರು, ಮದುಕುಮಾರ ಉ. ಹರಿಜನ, ಬಿ.ಎನ್. ಶಶಿಕಲಾ, ಬಿ.ಎಲ್. ರವಿಕುಮಾರ್, ಸಿ.ಎಸ್. ಪಾಟೀಲ ಕುಲಕರ್ಣಿ, ಝಕೀರ್ ನದಾಫ್, ಶಾಂತಮ್ಮ ಬಿ. ಮಲಕಲ್ಲ, ಸಂಗಮೇಶ ದೇವೇಂದ್ರ ಬದಾಮಿ, ಶಶಿಪ್ರಭಾ ಆರಾಧ್ಯ, ಗಣಪತಿ ಬಿ. ಹೆಗಡೆ ಇವರುಗಳಿಗೆ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗವೀಶ ವೀರಭದ್ರಯ್ಯ ಹಿರೇಮಠ ಅವರಿಗೆ ಪುಸ್ತಕ ಬಹುಮಾನ ಕೊಡಲಾಗಿದ್ದು, ಇವರ ಪರವಾಗಿ ಸುಶೀಲ ಹಿರೇಮಠ ಸ್ವೀಕರಿಸಿದರು.
ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರವನ್ನು ಬಿ. ಮಲ್ಲಿಕಾರ್ಜುನ ಅವರಿಗೆ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿನಿಧಿ ಪುರಸ್ಕಾರವನ್ನು ಕೊಟ್ಟೂರು ಕೋಮಲಮ್ಮ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರವನ್ನು ನಾಮದೇವ ನೂಲಿ, ಕೆ.ರಾಮಚಂದ್ರಯ್ಯ ದತ್ತಿ ನಿಧಿ ಪುರಸ್ಕಾರವನ್ನು ಅರವಿಂದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಹಾಗೂ ಸಂಚಾಲಕ ಟಿ.ಎಸ್. ಸದಾಶಿವಯ್ಯ, ಜಿಲ್ಲಾ ಪೌರಾಣಿಕ ನಾಟಕ ಕಲಾವೃಂದದ ಭೀಮಣ್ಣ ತಂಡದಿಂದ ಕಾರ್ಯಕ್ರಮಕ್ಕೂ ಮುನ್ನಾ ರಂಗಗೀತೆ ನಡೆಸಿಕೊಟ್ಟರು.