ಹುಳಿಯಾರು  : 

      ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ ಚಿರತೆಯೊಂದು ಸೆರೆಯಾಗಿದೆ.

      ಕಾಚನಕಟ್ಟೆಯ ಗ್ರಾಮಸ್ಥರು ಬಹಳ ದಿನಗಳಿಂದಲೂ ಈ ಭಾಗದಲ್ಲಿ ಚಿರತೆಯೊಂದು ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದೆಯಲ್ಲದೆ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ ಎಂದು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು.

      ಚಿರತೆಯ ಓಡಾಟದಿಂದ ಇಲ್ಲಿನ ನಿವಾಸಿಗಳು ಹಾಗೂ ದಾರಿಹೋಕರಿಗೆ ಆತಂಕ ಹಾಗೂ ಭಯದ ವಾತಾವರಣವಿದೆ. ಹಾಗಾಗಿ ಈ ವನ್ಯ ಪ್ರಾಣಿಯು ದಿನ ನಿತ್ಯ ಓಡಾಡುವ ಜಾಗದಲ್ಲಿ ಪಂಜರ (ಬೋನು) ವನ್ನಿಟ್ಟು ಸೆರೆ ಹಿಡಿಯಲು ಕ್ರಮವಹಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯವರು ಎರಡು ಕಡೆ ಪಂಜರವನ್ನಿಟ್ಟು ಚಿರತೆಯ ಚಲನವಲನ ಹಾಗೂ ಓಡಾಟದ ಬಗ್ಗೆ ನಿಗಾವಹಿಸುತ್ತಿದ್ದರು. ಎಂದಿನಂತೆ ಆಹಾರ ಅರಸುತ್ತಾ ಬಂದ ಚಿರತೆ ಇಲಾಖೆಯವರು ಇರಿಸಿದ ಬೋನಿಗೆ ಶುಕ್ರವಾರ ರಾತ್ರಿ ಬಿದ್ದಿದೆ.

       ಈ ಹಿಂದೆಯೂ ಕೂಡ ಇದೇ ಪ್ರದೇಶದಲ್ಲಿ ಚಿರತೆಯೊಂದು ಅರಣ್ಯ ಇಲಾಖೆಯ ಪಂಜರದಲ್ಲಿ ಬಿದ್ದಿದ್ದು. ಈಗ ಸೆರೆಯಾಗಿರುವ ಚಿರತೆಯು ಗಂಡು ಚಿರತೆಯಾಗಿದ್ದು ಬಿಸಿಲೆ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.  ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೆ.ಜಿ.ರವಿ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೆಚ್.ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಟಿ.ಕಿರಣ್, ಅರಣ್ಯ ರಕ್ಷಕರಾದ ದಿಲೀಪ್ ಕುಮಾರ್, ಅರಣ್ಯ ವೀಕ್ಷಕರಾದ ಸಂತೋಷ್ ಸವಣೂರ, ಎ.ಆರ್.ಸುರೇಶ, ದಿನಗೂಲಿ ನೌಕರರಾದ ಯಳನಾಡುವಿನ ನಾಗರಾಜು, ಸಂತೋಷ ಕಾರೇಹಳ್ಳಿರವರು ಚಿರತೆ ಸೆರೆಹಿಡಿಯುವ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

 

(Visited 12 times, 1 visits today)